
ದುಗ್ಧಿಕಾ (ಹಾಲು ಬಳ್ಳಿ )ಕೆಂಪು ನೆನೆ ಅಕ್ಕಿಗಿಡ, ಬಿಳಿ ನೆನೆಅಕ್ಕಿಗಿಡ, ದೊಡ್ಡ ಹಾಲುಕುಡಿ, ಸಣ್ಣ ಹಾಲುಕುಡಿ,ಅಚ್ಚೆಗಿಡ,ರೆಡ್ಡಿವಾರು ನಾನಬಾಲ, ಪಾಲುಕಾಡ, ನಾಗಾರ್ಜುನಿ, ನಾನಪಾಲ ಪಚ್ಚಪೋಟ್ಲಾಕು, ಅಮ್ಮನ್ ಪಚ್ಚೆರಸಿ, ನೀಲಪಾಳೈ ಎಂಬ ಹೆಸರುಗಳಿಂದ ಕರೆಯುತ್ತಾರೆ. ಈ ಸಸ್ಯವು ತೋಟ, ಹೊಲ, ಸಾಗುವಳಿ ಭೂಮಿ, ರಸ್ತೆಗಳ ಪಕ್ಕ, ಪಾಳು ಭೂಮಿ, ನೀರು ಹರಿಯುವ ಕಾಲುವೆಗಳ ಪಕ್ಕ,ತೇವಾಂಶ ಹೆಚ್ಚು ಇರುವ ಕಡೆ ಕಳೆಯಂತೆ ಬೆಳೆಯುತ್ತೆ.ಇದರಲ್ಲಿ ಕೆಂಪು ಹಾಗು ಬಿಳಿಯ ಬಣ್ಣದ ಎರಡು ಪ್ರಭೇದಗಳಿದ್ದು, 1/2 -1 ಅಡಿ ನೆಲದಲ್ಲಿ ಹಬ್ಬಿ ಬೆಳೆಯುತ್ತವೆ.
ದೇಹದಲ್ಲಿ ಉಷ್ಣತೆ ಹೆಚ್ಚಿಗಿದ್ದಾಗ ಹಾಲುಬಳ್ಳಿಯ ಎಲೆಗಳನ್ನು ತಂದು ಶುಭ್ರಗೊಳಿಸಿ, ಜೊತೆಗೆ ನಾಟಿ ಈರುಳ್ಳಿ, ಬೆಳ್ಳುಳ್ಳಿ ತಕ್ಕಷ್ಟು ಉಪ್ಪು ಸೇರಿಸಿ ಚೆಟ್ನಿ ಮಾಡಿ ಸೇವಿಸಿದರೆ, ದೇಹದಲ್ಲಿನ ಉಷ್ಣತೆ ಅತಿ ಶೀಘ್ರದಲ್ಲಿ ಕಡಿಮೆಯಾಗುತ್ತೆ.
ಹಾಲುಬಳ್ಳಿಯ ಎಲೆಗಳ ಜೊತೆಗೆ ಹೆಸರುಕಾಳು, ಸೇರಿಸಿ ನಾಟಿ ಹಸುವಿನ ತುಪ್ಪದಲ್ಲಿ ಹುರಿದು ಸೇವಿಸಿದರೆ ಬಾಯಿಹುಣ್ಣು ಹಾಗು ಹೊಟ್ಟೆಯಲ್ಲಿನ ಹುಣ್ಣು ( ಅಲ್ಸರ್) ವಾಸಿಯಾಗುತ್ತೆ.ಈ ಗಿಡದ
ಹಾಲನ್ನು ಬಾಯಿ ಹುಣ್ಣಿಗೆ ಎರಡು ಮೂರು ದಿನ ಲೇಪನ ಮಾಡುತ್ತಾ ಬಂದರೆ ಬೇಗನೆ ಗುಣವಾಗುತ್ತೆ.
ಬಾಣಂತಿಯರಲ್ಲಿ ಮೊಲೆಹಾಲು ಕಡಿಮೆ ಇದ್ದಾಗ ಹಾಲುಬಳ್ಳಿಯ ಹೂವುಗಳನ್ನು ತಂದು ಶುಭ್ರಗೊಳಿಸಿ, ನುಣ್ಣಿಗೆ ಅರೆದು 1 ಲೋಟ ಹಸುವಿನ ಹಾಲಿನಲ್ಲಿ
ಕಲಸಿ ಬೆಳಿಗ್ಗೆ ಊಟಕ್ಕೆ ಮುಂಚೆ ಕುಡಿಯುತ್ತಾ ಬಂದರೆ ತಾಯಂದಿರಲ್ಲಿ ಎದೆ ಹಾಲು ಹೆಚ್ಚುತ್ತೆ.
ಹಾಲುಬಳ್ಳಿ ಎಲೆಗಳ ಜೊತೆಯಲ್ಲಿ 3-4 ಬೇವಿನ ಎಲೆಗಳು, 5-6 ಕಾಳು ಮೆಣಸು ನುಣ್ಣಿಗೆ ಅರೆದು 1 ಲೋಟ ಉಗರು ಬೆಚ್ಚಗಿನ ನೀರಲ್ಲಿ ಕಲಸಿ ಬೆಳಿಗ್ಗೆ ಊಟಕ್ಕೆ 1/2 ಗಂಟೆ ಮೊದಲು ಕುಡಿದರೆ ದೇಹದಲ್ಲಿ ರಕ್ತಶುದ್ಧಿಯಾಗುತ್ತೆ.
ಹಾಲುಬಳ್ಳಿಯ ಎಲೆಗಳನ್ನು ತಂದು, ಶುಭ್ರಗೊಳಿಸಿ ಅದಕ್ಕೆ ಚಿಟಿಕೆ ಉಪ್ಪು, ಚಿಟಿಕೆ ಅರಸಿಣ ಪುಡಿ, ಚಿಟಿಕೆ ಕಾಳು ಮೆಣಸಿನಪುಡಿ ಸೇರಿಸಿ 200ml ನೀರಿಗೆ ಹಾಕಿ ಒಲೆಯಮೇಲಿಟ್ಟು ಚೆನ್ನಾಗಿ ಕುದಿಸಿ 100ml ಆದಾಗ ಕೆಳಗಿಳಿಸಿ, ಉಗರುಬೆಚ್ಚಗಾದಾಗ ಸೋಸಿ, ಬೆಳಿಗ್ಗೆ ಸಂಜೆ 50ml ನಂತೆ ಸೇವಿಸಿದರೆ, ಜ್ವರ, ನೆಗಡಿ, ಕೆಮ್ಮು ವಾಸಿಯಾಗುತ್ತೆ.
ಹಾಲುಬಳ್ಳಿಯ 2ಚಮಚ ರಸಕ್ಕೆ ಚಿಟಿಕೆ ಕಾಳು ಮೆಣಸಿನಪುಡಿ ಸೇರಿಸಿ, ಸ್ತ್ರೀಯರು ಋತಸ್ರಾವವಾದ ಮೂರು ದಿನ ಬೆಳಿಗ್ಗೆ ಸಂಜೆ ಸೇವಿಸಿ, ಸಪ್ಪೆ ಊಟ ತಿಂದರೆ ಗರ್ಭಾಶಯ ದೋಷಗಳು ದೂರವಾಗಿ ಸಂತಾನ ಪ್ರಾಪ್ತಿಯಾಗಲು ಅನುಕೂಲವಾಗುತ್ತೆ.ಇದು ಸಂತಾನ ಭಾಗ್ಯ ಪಡೆಯಲು ದಿವೌಷಧಿ.
ಹಾಲುಬಳ್ಳಿಯನ್ನು ಸಮೂಲ ಸಹಿತ ನೆರಳಲ್ಲಿ ಒಣಗಿಸಿ, ವಸ್ತ್ರಾಗಾಲಿತ ಚೂರ್ಣ ಮಾಡಿಟ್ಟುಕೊಂಡು,
1 ಚಮಚ ಚೂರ್ಣಕ್ಕೆ 1 ಚಮಚ ಕೆಂಪು ಕಲ್ಲು ಸಕ್ಕರೆ ಸೇರಿಸಿ 1/2 ಲೋಟ ಉಗರು ಬೆಚ್ಚಗಿನ ನೀರಲ್ಲಿ ಕಲಸಿ ಊಟಕ್ಕೆ 1/2 ಗಂಟೆಯ ಮೊದಲು ಕುಡಿದು, ಮೇಲೆ 1 ಲೋಟ ಹಾಲು ಕುಡಿಯುತ್ತಾ ಬಂದರೆ ಲೈಂಗಿಕ ಸಮಸ್ಯೆಗಳು ದೂರವಾಗಿ, ಶೃಂಗಾರದಲ್ಲಿ ಆಸಕ್ತಿ ಹೆಚ್ಚುತ್ತೆ.ಗಂಡಸರಲ್ಲಿ ವೀರ್ಯಾಣುಗಳ ಸಂಖ್ಯೆ
ಹೆಚ್ಚಿ, ನಪುಂಷಕತ್ವ ದೂರವಾಗುತ್ತೆ.ಆರೋಗ್ಯ ಸುಧಾರಣೆಯಾಗಿ, ಆಯಸ್ಸು ವೃದ್ಧಿಸುತ್ತೆ. ಸ್ತ್ರೀಯರು ಇದೇ ರೀತಿ ತೆಗೆದುಕೊಂಡರೆ, ಋತಸ್ರಾವ ದೋಷಗಳು, ಗರ್ಭಾಶಯ ಸಮಸ್ಯೆಗಳು ಸಂಪೂರ್ಣ ದೂರವಾಗುತ್ತವೆ.
2 ಚಮಚ ಹಾಲುಬಳ್ಳಿಯ ಬೇರಿನ ಕಷಾಯಕ್ಕೆ,1 ಚಮಚ ನಿಂಬೆಹಣ್ಣಿನ ರಸ, 2 ಚಮಚ ಜೇನುತುಪ್ಪ ಕಲಸಿ ಸೇವಿಸಿದರೆ ವಾಂತಿಯಾಗುವುದು ನಿಲ್ಲುತ್ತೆ.
ಹಾಲುಬಳ್ಳಿಯನ್ನು ಮುರಿದಾಗ ಬರುವ ಹಾಲನ್ನು 1-2 ಹನಿ ಕಣ್ಣಿಗೆ ಬಿಟ್ಟುಕೊಂಡರೆ, ಕಣ್ಣಿನ ಪೊರೆರೋಗ, ದೃಷ್ಟಿದೋಷ, ದೃಷ್ಠಿ ಹಾಳುಮಾಡುವ ಕಣ್ಣಿನ ಹೂ ರೋಗ ವಾಸಿಯಾಗಿ, ಕಣ್ಣಿನ ದೃಷ್ಠಿ ಸುಗುಮವಾಗಿ ಕಾಣುತ್ತೆ. (ಕಣ್ಣಿಗೆ ಹಾಲನ್ನು ಆಯುರ್ವೇದ ವೈದ್ಯರ ಸಲಹೆ ಪಡೆದುಕೊಂಡು ಹಾಕಬೇಕು)
ಮಧುಮೇಹಿಗಳ ಪಾಲಿಗೆ ಹಾಲುಬಳ್ಳಿ (ಅಮೃತ) ಅತ್ಯದ್ಭುತ ದಿವೌಷಧ. ಸಮೂಲದ ವಸ್ತ್ರಗಾಲಿತ ಚೂರ್ಣವನ್ನು ಬೆಳಿಗ್ಗೆ ಸಂಜೆ ಊಟಕ್ಕೆ 1/2 ಗಂಟೆ ಮೊದಲು, ಉಗರು ಬೆಚ್ಚಗಿನ 1/2 ಲೋಟ ನೀರಿಗೆ ಬೆರಸಿ ಕುಡಿಯುತ್ತಾ ಬಂದರೆ ಸಕ್ಕರೆ ಕಾಯಿಲೆ ಖಚಿತವಾಗಿ ಅತೋಟಿಗೆ ಬರುತ್ತೆ.
ಹಾಲುಬಳ್ಳಿ ಮುರಿದಾಗ ಬರುವ ಹಾಲನ್ನು, ಬಾವು, ಗಡ್ಡೆ,ಹುಣ್ಣು, ಗಾಯಕ್ಕೆ ಲೇಪನ ಮಾಡುತ್ತಿದ್ದರೆ ಬೇಗನೆ ಗುಣವಾಗುತ್ತೆ.
ಪುಲಿಪುರಿಗಳಿಗೆ ಹಾಲುಬಳ್ಳಿಯ ಹಾಲನ್ನು ಲೇಪನ ಮಾಡುತ್ತಿದ್ದರೆ, ಬೇಗನೆ ಮಾಯವಾಗುತ್ತವೆ.
3 ಚಮಚ ಹಾಲುಬಳ್ಳಿಯ ಎಲೆಗಳ ರಸಕ್ಕೆ ಸಮನಾಗಿ 3 ಚಮಚ ತುಳಸಿ ರಸ, ಅದಕ್ಕೆ 1 ಚಮಚ ಶ್ರೀಗಂಧದ ಚೂರ್ಣ, 2 ಚಮಚ ಮೊಸರು ಕಲಸಿ ಮುಖಕ್ಕೆ ಲೇಪನ ಮಾಡಿ 1/2 ಗಂಟೆಯ ನಂತರ ಉಗರು ಬೆಚ್ಚಗಿನ ನೀರಲ್ಲಿ ತೊಳೆದು ಕೊಂಡರೆ ಮೊಡವೆ, ಮಚ್ಚೆಗಳು ದೂರವಾಗಿ, ಮುಖದ ಚರ್ಮ ಮೃದುವಾಗಿ ಕಾಂತಿಯಿಂದ ಹೊಳೆಯುತ್ತೆ.ಇದೇ ರೀತಿ ದೇಹಕ್ಕೆಲ್ಲ ಲೇಪನ ಮಾಡಿ ಸ್ನಾನ ಮಾಡಿದರೆ, ಚರ್ಮ ವ್ಯಾಧಿಗಳು ದೂರವಾಗಿ, ದೇಹವು ಆರೋಗ್ಯದಿಂದ ಸದೃಢವಾಗುತ್ತೆ. ಈ ಮೂಲಿಕೆಯ ಉಪಯೋಗಗಳು ಅಪಾರವಾದದ್ದು.ಇದು ನೂರಾರು ವ್ಯಾಧಿಗಳಿಗೆ ರಾಮಬಾಣ.
ಗೆಳೆಯರೆ ವಂದನೆಗಳು