Design a site like this with WordPress.com
Get started

ಯೋಗ ಬೇರೆ ಯಾವುದೇ ವ್ಯಾಯಾಮ ಪ್ರಾಕಾರಗಳಿಗಿಂತ ಭಿನ್ನ ಏಕೆ?

ಜೂನ್ 21 ರ ಇಂದಿನ ದಿನ 6 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನಾಗಿ ಇಡೀ ವಿಶ್ವದಾದ್ಯಂತ ಆಚರಣೆ ಮಾಡಲಾಗುತ್ತಿದೆ. ನಮ್ಮ ಭಾರತದಲ್ಲಿ ಯೋಗಕ್ಕೆ ಅದರದೇ ಆದ ವೈಶಿಷ್ಟ್ಯವಿದೆ. ಯೋಗ ಎಂಬ ಪದ ಹುಟ್ಟಿಕೊಂಡಿದ್ದೇ ನಮ್ಮ ಭಾರತ ದೇಶದಿಂದ ಎಂದು ಹೇಳಲು ಸಾಕಷ್ಟು ಹೆಮ್ಮೆಯಾಗುತ್ತದೆ.

ಇಂದು ಹಲವಾರು ದೇಶಗಳು ತಾವು ಎಷ್ಟೇ ಎತ್ತರಕ್ಕೆ ಬೆಳೆದು ನಿಂತಿದ್ದರೂ, ನಮ್ಮ ದೇಶದ ಯೋಗ ಪದ್ಧತಿಯನ್ನು ಅವರ ಆರೋಗ್ಯ ಸುಧಾರಣೆಯಲ್ಲಿ ಅನುಸರಿಸುತ್ತವೆ ಎಂದರೆ ನಿಜಕ್ಕೂ ಭಾರತೀಯರಾದ ನಮಗೆ ಹೆಮ್ಮೆಯ ವಿಚಾರ.

ನಮ್ಮ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಕರೋನಾ ಸಂಕಷ್ಟವಿರುವ ಈ ಕಾಲದಲ್ಲಿ, ಸಾಧ್ಯವಾದಷ್ಟು ಮನೆಯಲ್ಲಿಯೇ ಯೋಗ ಮಾಡಲು ಮತ್ತು ನಾವು ಮಾಡುವ ಯೋಗಾಭ್ಯಾಸವನ್ನು ಮೂರು ನಿಮಿಷಗಳ ಕಾಲ ಸೆರೆಹಿಡಿದು ಅದನ್ನು ಭಾರತ ಸರ್ಕಾರದ ಆಯುಷ್ ಮಂತ್ರಾಲಯ ಜಾರಿ ಪಡಿಸಿರುವ ಅಂತರಾಷ್ಟ್ರೀಯ ವಿಡಿಯೋ ಬ್ಲಾಗ್ ನಲ್ಲಿ ಅಂದರೆ ‘ My Life My Yoga ‘ ಎಂಬ ಸ್ಪರ್ಧೆಯಲ್ಲಿ ಅಪ್ಲೋಡ್ ಮಾಡಲು ತಮ್ಮ ‘ ಮನ್ ಕಿ ಬಾತ್ ‘ ಕಾರ್ಯಕ್ರಮದಲ್ಲಿ ದೇಶದ ನಾಗರೀಕರಿಗೆ ವಿನಂತಿ ಮಾಡಿದ್ದಾರೆ.

ಈ ಲೇಖನದಲ್ಲಿ ಅಂತರಾಷ್ಟ್ರೀಯ ಯೋಗ ದಿನವಾದ ಇಂದು ವ್ಯಾಯಾಮಕ್ಕಿಂತ ಯೋಗ ಹೇಗೆ ಭಿನ್ನ ಮತ್ತು ನಮ್ಮ ಜೀವನದಲ್ಲಿ ನಾವು ಯೋಗಾಭ್ಯಾಸವನ್ನು ಏಕೆ ಅಳವಡಿಸಿಕೊಳ್ಳಬೇಕು ಎಂಬ ವಿಚಾರಗಳನ್ನು ತಿಳಿಸಲು ಬಯಸುತ್ತೇವೆ.

1 ನಮ್ಮ ದೇಹ ಮತ್ತು ಮನಸ್ಸಿಗೆ ಪ್ರಫುಲ್ಲತೆ ಸಿಗುತ್ತದೆ : –

ಯೋಗ ಮುಖ್ಯವಾಗಿ ನಮ್ಮ ಮನಸ್ಸಿನ ಧ್ಯಾನಕ್ಕೆ ಸಂಬಂಧಪಟ್ಟ ವಿಚಾರ ಆಗಿರುವುದರಿಂದ ನಮ್ಮ ಮನಸ್ಸನ್ನು ಒಂದೆಡೆ ಕೇಂದ್ರೀಕರಿಸಿ ಯಾವುದೇ ಹೊರಗಿನ ಅಡೆತಡೆಗಳಿಲ್ಲದೆ ವಿವಿಧ ಯೋಗಾಸನ ಭಂಗಿಗಳನ್ನು ಮಾಡಲು ಮುಂದಾಗುವುದರಿಂದ ದೇಹದಲ್ಲಿ ನಕಾರಾತ್ಮಕತೆ ದೂರವಾಗಿ ಸಕಾರಾತ್ಮಕ ಶಕ್ತಿ ಹರಿಯಲು ಪ್ರಾರಂಭವಾಗುತ್ತದೆ.

ಪ್ರತಿದಿನದ ನಮ್ಮ ಜೀವನದ ಜಂಜಾಟದಲ್ಲಿ ಸಿಲುಕಿ ಒದ್ದಾಡಿ ನಮ್ಮ ಮಾನಸಿಕ ಸ್ಥಿಮಿತವನ್ನು ಅದಾಗಲೇ ಕಳೆದುಕೊಂಡಿರುತ್ತೇವೆ. ದೇಹಕ್ಕೆ ಗಾಯವಾದರೆ ಯಾವುದಾದರೂ ಔಷಧಿ ತೆಗೆದುಕೊಂಡು ವಾಸಿ ಮಾಡಿಕೊಳ್ಳಬಹುದು.

ಅದರ ಬದಲು ಮನಸ್ಸಿಗೆ ಪ್ರತಿದಿನ ಆಗುವ ಇಂತಹ ಸಣ್ಣ ಸಣ್ಣ ಗಾಯಗಳು ಮಾನಸಿಕವಾಗಿ ನಮ್ಮನ್ನು ಕುಗ್ಗಿಸುವುದು ಮಾತ್ರವಲ್ಲದೆ ದೈಹಿಕವಾಗಿ ಸಹ ನಮ್ಮನ್ನು ಬೆಂಡಾಗುವಂತೆ ಮಾಡುತ್ತವೆ.

ಹಾಗಾಗಿ ಧ್ಯಾನ ನಮ್ಮ ಮನಸ್ಸಿನ ಚಂಚಲತೆಗೆ, ಮಾನಸಿಕ ಒತ್ತಡಕ್ಕೆ ಮತ್ತು ಆತಂಕಕ್ಕೆ ದಿವ್ಯೌಷಧ ಎಂದು ಹೇಳಬಹುದು. ಪ್ರತಿದಿನ ಬೆಳಗ್ಗೆ ಅಥವಾ ಸಂಜೆ ಅರ್ಧ ಅಥವಾ ಒಂದು ಗಂಟೆ ಧ್ಯಾನ ಮಾಡಿ ಯೋಗ ಮಾಡುವ ಅಭ್ಯಾಸವನ್ನು ರೂಡಿ ಮಾಡಿಕೊಳ್ಳುವುದರಿಂದ ನಮ್ಮ ದೇಹ ಮತ್ತು ನಮ್ಮ ಮನಸ್ಸು ನಮ್ಮ ನಿಯಂತ್ರಣದಲ್ಲಿರುತ್ತದೆ. ಆದರೆ ವ್ಯಾಯಾಮ ಕೇವಲ ನಮ್ಮ ದೈಹಿಕ ಸದೃಢತೆಗೆ ಮತ್ತು ಆರೋಗ್ಯದ ಕಡೆಗೆ ಮಾತ್ರ ಪ್ರಯೋಜನ ಉಂಟುಮಾಡುತ್ತದೆ.

2. ಯೋಗ ನಮ್ಮ ಸಂಪೂರ್ಣ ಹೊಣೆ ವಹಿಸಿಕೊಳ್ಳುತ್ತದೆ : –

ಸಾಧಾರಣವಾಗಿ ಹೇಳಬೇಕೆಂದರೆ ಯೋಗಾಭ್ಯಾಸದಲ್ಲಿ ಕೇವಲ ಒಂದು ಅಥವಾ ಎರಡು ಭಂಗಿಗಳು ಕೂಡಿರುವುದಿಲ್ಲ. ಹಲವಾರು ಭಂಗಿಗಳ ಯೋಗಾಸನಗಳನ್ನು ಒಂದಾದ ಮೇಲೆ ಒಂದರಂತೆ ಮಾಡುವುದರಿಂದ ನಮ್ಮ ದೇಹದ ಎಲ್ಲಾ ಪ್ರಕ್ರಿಯೆಗಳು ಸಮತೋಲನಗೊಳ್ಳುತ್ತವೆ.

ಮೊಟ್ಟಮೊದಲಿಗೆ ನಮ್ಮ ಉಸಿರಾಟದ ಪ್ರಕ್ರಿಯೆಯಿಂದ ಶುರುವಾಗಿ ಜೀರ್ಣ ಪ್ರಕ್ರಿಯೆ, ರಕ್ತ ಸಂಚಾರ, ಹಾರ್ಮೋನುಗಳ ಉತ್ಪಾದನೆ, ಮೂತ್ರಪಿಂಡಗಳ ಕಾರ್ಯಕ್ಷಮತೆ, ಮೂಳೆಗಳ ಆರೋಗ್ಯ ಹೀಗೆ ನಮ್ಮ ದೇಹಕ್ಕೆ ಸಂಬಂಧಪಟ್ಟ ಪ್ರತಿಯೊಂದು ವಿಚಾರದ ಮೇಲೂ ಯೋಗಾಭ್ಯಾಸ ಪ್ರಭಾವ ಬೀರುತ್ತದೆ.

ಮುಖ್ಯವಾಗಿ ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ವಿಷಕಾರಿ ಅಂಶಗಳು ಬೆವರು ಹಾಗೂ ಮೂತ್ರದ ಮುಖಾಂತರ ಹೊರಬರುತ್ತವೆ. ರಕ್ತದ ಒತ್ತಡ ಮತ್ತು ಮಧುಮೇಹದಿಂದ ಬಳಲುತ್ತಿರುವವರಿಗೆ ಯೋಗಾಭ್ಯಾಸದಿಂದ ಸಾಕಷ್ಟು ಒಳ್ಳೆಯ ಪ್ರಯೋಜನಗಳು ಲಭ್ಯವಾಗುತ್ತವೆ.

ಆದರೆ ವ್ಯಾಯಾಮದ ಅಭ್ಯಾಸ ರೂಡಿ ಮಾಡಿಕೊಳ್ಳುವುದರಿಂದ ನಮ್ಮ ಹೃದಯದ ಆರೋಗ್ಯ ಉತ್ತಮಗೊಂಡು ಮಾಂಸಖಂಡಗಳು ಬಲಗೊಳ್ಳುತ್ತವೆ ಅಷ್ಟೇ.null

3. ಮಾನಸಿಕವಾಗಿ ಸದೃಢವಾಗಲು ಸಹಾಯ ಮಾಡುತ್ತದೆ : –

ಮೊದಲೇ ಹೇಳಿದಂತೆ ಯೋಗ ಮತ್ತು ಧ್ಯಾನ ಎರಡಕ್ಕೂ ಅವಿನಾಭಾವ ಮತ್ತು ನೇರವಾದ ಸಂಬಂಧವಿದೆ.

ಮಾನಸಿಕವಾಗಿ ನಮ್ಮನ್ನು ಬಲಗೊಳಿಸುವ ಹಲವಾರು ಆಯಾಮಗಳ ಯೋಗಾಭ್ಯಾಸ ಮತ್ತು ಧ್ಯಾನ, ಎಂತಹ ಕಷ್ಟಕರವಾದ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕೆಂಬ ಛಲವನ್ನು ನಮ್ಮಲ್ಲಿ ತುಂಬುತ್ತದೆ. ಬಹಳಷ್ಟು ಸಂದರ್ಭಗಳಲ್ಲಿ ಯಾವುದಾದರೂ ವಿಚಾರದ ಬಗ್ಗೆ ನಮ್ಮ ನಿಲುವು ಏನು ಎಂಬುದನ್ನು ತಿಳಿಸಲು ಕಷ್ಟಪಡುತ್ತೇವೆ.

ಆದರೆ ಆನಂತರ ಇಷ್ಟು ಸಣ್ಣ ವಿಚಾರಕ್ಕೆ ನಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ನಮಗೆ ಸಾಧ್ಯವಾಗಲಿಲ್ಲವಲ್ಲ ಎಂದು ಕೊರಗುತ್ತೇವೆ. ಇದು ಕೇವಲ ಒಂದು ಉದಾಹರಣೆ ಅಷ್ಟೇ. ಇಂತಹ ಹಲವಾರು ಸಂದರ್ಭಗಳನ್ನು ಯೋಗ ಮಾಡುವುದರಿಂದ ಮತ್ತು ಧ್ಯಾನಾಭ್ಯಾಸ ರೂಡಿ ಮಾಡಿಕೊಳ್ಳುವುದರಿಂದ ದಿಟ್ಟವಾಗಿ ಎದುರಿಸಬಹುದು. ವ್ಯಾಯಾಮದಿಂದ ಮಾನಸಿಕವಾಗಿ ಅಷ್ಟೇನೂ ಪ್ರಯೋಜನವಾಗುವುದಿಲ್ಲ.

ಇತರರ ಮಧ್ಯೆ ನಾವು ವ್ಯಾಯಾಮ ಮಾಡಲು ಮುಂದಾಗುವುದರಿಂದ ಅವರಷ್ಟೇ ಸರಿಸಮಾನವಾಗಿ ಅಭ್ಯಾಸ ಮಾಡಬೇಕಾದ ಅಗತ್ಯತೆ ಇರುತ್ತದೆ. ಜೊತೆಗೆ ಮನಸ್ಸಿನಲ್ಲಿ ಎಲ್ಲಿ ನಮ್ಮ ದೇಹಕ್ಕೆ ಬಹಳ ಬೇಗನೆ ಆಯಾಸ ಉಂಟಾಗುವುದೋ ಎಂಬ ಒಂದು ಸಣ್ಣ ಅಳುಕು ಭಾವನೆ ಇದ್ದೇ ಇರುತ್ತದೆ.

4. ನಮ್ಮ ಮೇಲೆ ನಮ್ಮನ್ನು ಕೇಂದ್ರೀಕರಿಸುತ್ತದೆ :

ಯೋಗಕ್ಕೂ ವ್ಯಾಯಾಮಕ್ಕೂ ಇರುವ ಬಹಳ ದೊಡ್ಡ ವ್ಯತ್ಯಾಸ ಇದು ಎಂದು ಹೇಳಬಹುದು. ಸಾಮಾನ್ಯವಾಗಿ ನಾವು ಯೋಗವನ್ನು ಪ್ರಶಾಂತವಾದ ವಾತಾವರಣದಲ್ಲಿ ಬೇರೆಯವರ ಅಡಚಣೆಯಿಲ್ಲದೆ ಅಭ್ಯಾಸ ಮಾಡಲು ಮುಂದಾಗುತ್ತೇವೆ. ಆದರೆ ವ್ಯಾಯಾಮ ಹಾಗಲ್ಲ. ವ್ಯಾಯಾಮ ಶಾಲೆಗೆ ಹೋದ ಕ್ಷಣ ನಮಗಿಂತ ಮುಂಚೆಯೇ ಬಹಳಷ್ಟು ಜನರು ಬಂದು ಅಲ್ಲಿ ಅಭ್ಯಾಸ ಮಾಡುತ್ತಿರುತ್ತಾರೆ.

ಅವರ ಮಧ್ಯೆ ನಾವು ಕೂಡ ಅವರ ಜೊತೆಯಲ್ಲೇ ಅಭ್ಯಾಸ ಮಾಡಬೇಕಾಗುತ್ತದೆ. ಒಬ್ಬರಿಗೊಬ್ಬರು ಮಾತನಾಡಬೇಕಾಗುತ್ತದೆ, ಒಬ್ಬರನ್ನೊಬ್ಬರು ನೋಡಬೇಕಾಗುತ್ತದೆ, ಜೊತೆಗೆ ಆಗಾಗ ದಣಿವಾರಿಸಿಕೊಳ್ಳಬೇಕಾಗುತ್ತದೆ. ಯೋಗಾಭ್ಯಾಸದಲ್ಲಿ ಇಂತಹ ಯಾವ ಅಡೆತಡೆಗಳು ಇಲ್ಲದಿರುವುದರಿಂದ ಮತ್ತು ನಾವೊಬ್ಬರೇ ಅಭ್ಯಾಸ ಮಾಡುವುದರಿಂದ ನಮ್ಮ ಬಗ್ಗೆ ನಾವು ಹೆಚ್ಚು ಗಮನ ವಹಿಸಲು ಸಹಾಯ ಆಗುತ್ತದೆ.

5. ಯೋಗ ನಿಮ್ಮ ದೇಹವನ್ನು ಭಾಗಿಸುತ್ತದೆ : –

ಯೋಗಾಭ್ಯಾಸದ ಭಂಗಿಗಳೇ ಹಾಗೆ. ಪ್ರತಿಯೊಂದು ಭಂಗಿಯಲ್ಲಿಯೂ ಸಾಮಾನ್ಯವಾಗಿ ನಮ್ಮ ದೇಹದ ಎಲ್ಲ ಅಂಗಾಂಗಗಳು ಅಭ್ಯಾಸಕ್ಕೆ ಒಳಗಾಗಬೇಕಾಗುತ್ತದೆ. ಹೀಗಾಗಿ ಯೋಗದಿಂದ ಏಕಕಾಲಕ್ಕೆ ಎಲ್ಲ ಅಂಗಗಳಿಗೂ ಸದೃಢತೆ ಸಿಕ್ಕಂತಾಗುತ್ತದೆ. ಆದರೆ ವ್ಯಾಯಾಮ ಶಾಲೆಯಲ್ಲಿ ವ್ಯಾಯಮ ತಜ್ಞರು ದಿನಕ್ಕೊಂದು ದೇಹದ ಅಂಗಾಂಗದ ಮೇಲೆ ಕೇಂದ್ರೀಕರಿಸಲು ಹೇಳಿ ಅದಕ್ಕೆ ಸಂಬಂಧಪಟ್ಟ ವ್ಯಾಯಾಮದ ಅಭ್ಯಾಸವನ್ನು ಮಾತ್ರ ಮಾಡಲು ಸೂಚಿಸುತ್ತಾರೆ. ಹೀಗಾಗಿ ವ್ಯಾಯಾಮದ ವಿಚಾರದಲ್ಲಿ ಇಡೀ ದೇಹದ ಸದೃಢತೆಗೆ ಒಂದು ವಾರವೇ ಬೇಕಾಗುತ್ತದೆ.

6 ಯೋಗ ತುಂಬಾ ಪರಿಣಾಮಕಾರಿ : –

ಯೋಗಾಸನದಲ್ಲಿ ನಾವು ಯಾವುದೇ ಇತರ ಉಪಕರಣಗಳನ್ನು ಉಪಯೋಗಿಸುವುದಿಲ್ಲ. ಇಲ್ಲಿ ನಮ್ಮ ದೇಹದ ಅಂಗಾಂಗಗಳೇ ಒಂದೊಂದು ಉಪಕರಣಗಳು.

ಅವುಗಳನ್ನು ಸರಿಯಾದ ರೀತಿಯಲ್ಲಿ ಯೋಗದ ಆಸನಕ್ಕೆ ಅನುಸಾರವಾಗಿ ಬಾಗಿಸಲು ಪ್ರಯತ್ನಪಡುತ್ತೇವೆ. ಹೀಗಾಗಿ ನಮ್ಮ ದೇಹದ ಯಾವ ಅಂಗ ಪ್ರಸ್ತುತ ಯಾವ ಸ್ಥಿತಿಯಲ್ಲಿದೆ ಎಂಬುದು ನಮಗೆ ಸುಲಭವಾಗಿ ತಿಳಿಯುತ್ತದೆ.

ಇದರಿಂದ ಮಾನಸಿಕವಾಗಿ ಸಹ ನಾವು ಅಭಿವೃದ್ಧಿಯಾಗುತ್ತೇವೆ. ಆದರೆ ವ್ಯಾಯಾಮದಲ್ಲಿ ಹಾಗಲ್ಲ. ನಮ್ಮ ಗಮನ ಏನಿದ್ದರೂ ನಾವು ಬಳಸುವ ಉಪಕರಣಗಳ ಮೇಲೆಯೇ ಇರುತ್ತದೆ.

ಇದರಿಂದ ಮಾನಸಿಕವಾಗಿ ನಮಗೆ ಯಾವುದೇ ಪ್ರಯೋಜನ ಆಗುವುದಿಲ್ಲ. ವ್ಯಾಯಮ ಕೇವಲ ದೇಹಕ್ಕೆ ಸಂಬಂಧಪಟ್ಟ ವಿಚಾರ ಆಗಿರುತ್ತದೆ. ಆದರೆ ಯೋಗಾಭ್ಯಾಸ ನಮ್ಮ ದೇಹ ಮತ್ತು ನಮ್ಮ ಮನಸ್ಸು ಎರಡನ್ನೂ ಏಕಕಾಲದಲ್ಲಿ ಸಮತೋಲನಗೊಳಿಸುವ ತಂತ್ರ ಹೊಂದಿದೆ.

7. ಯೋಗಕ್ಕೆ ನಿರ್ದಿಷ್ಟ ಸ್ಥಳವಿಲ್ಲ : –

ಯೋಗಾಭ್ಯಾಸವನ್ನು ಯೋಗ ಶಾಲೆಯಲ್ಲಿ ಮಾತ್ರ ಮಾಡಬೇಕು ಎಂದೇನಿಲ್ಲ. ಕೇವಲ ಪ್ರಶಾಂತವಾದ ವಾತಾವರಣ ಒಂದಿದ್ದರೆ ಸಾಕು. ಎಲ್ಲೆಂದರಲ್ಲಿ ಯಾವಾಗ ಬೇಕಾದರೆ ಆಗ ಯೋಗದ ಭಂಗಿಗಳನ್ನು ಶುರು ಮಾಡಬಹುದು. ಆದರೆ ವ್ಯಾಯಮ ಹಾಗಲ್ಲ.

ವ್ಯಾಯಾಮದ ಅಭ್ಯಾಸ ಮಾಡಲು ನಾವು ವ್ಯಾಯಾಮ ಶಾಲೆಗೆ ಹೋಗಬೇಕು. ಇಲ್ಲವೆಂದರೆ ಮನೆಯಲ್ಲಿಯೇ ವ್ಯಾಯಾಮದ ಉಪಕರಣಗಳನ್ನು ತಂದಿಟ್ಟುಕೊಂಡು ಅಭ್ಯಾಸ ಮಾಡಲು ಮುಂದಾಗಬೇಕು. ಯೋಗ ಶಾಂತಿಯಿಂದ ಕೊಡಿದರೆ ವ್ಯಾಯಾಮ ಶಬ್ದಗಳಿಂದ ತುಂಬಿರುತ್ತವೆ.

8. ಯೋಗ ಪ್ರಶಾಂತತೆಯ ಪ್ರತೀಕ : –

ಮೇಲೆ ಹೇಳಿದಂತೆ ನಾವು ಯೋಗ ಅಭ್ಯಾಸ ಮಾಡಲು ಯಾವುದೇ ಉಪಕರಣಗಳನ್ನು ಬಳಸುವುದಿಲ್ಲ. ಪ್ರಶಾಂತವಾದ ವಾತಾವರಣದಲ್ಲಿ ಒಂದು ಯೋಗದ ಚಾಪೆ ಇದ್ದರೆ ಸಾಕಾಗುತ್ತದೆ. ಆರಾಮವಾಗಿ ಹುಲ್ಲುಹಾಸಿನ ಮೇಲೆ ಸಹ ಯೋಗಾಭ್ಯಾಸ ಮಾಡಬಹುದು.

ಆದರೆ ವ್ಯಾಯಾಮದಲ್ಲಿ ನಮ್ಮ ದೇಹದ ಸದೃಢತೆಯನ್ನು ಗಮನದಲ್ಲಿಟ್ಟುಕೊಂಡು ನಮ್ಮ ದೇಹವನ್ನು ಬಲಪಡಿಸುವ ಅಥವಾ ನಮ್ಮ ದೇಹದ ತೂಕವನ್ನು ಕಡಿಮೆ ಮಾಡುವ ಉಪಕರಣಗಳನ್ನು ಎತ್ತಿ ಇಳಿಸಿ ಅಭ್ಯಾಸ ಮಾಡಬೇಕಾಗುತ್ತದೆ. ಇದರಿಂದ ಮೊದಮೊದಲು ಅಭ್ಯಾಸ ಮಾಡುತ್ತಿರುವವರಿಗೆ ಗಾಯವಾಗುವ ಸಂಭವ ಹೆಚ್ಚಿರುತ್ತದೆ.

9. ಯೋಗ ನೋವುನಿವಾರಕ : –

ಯೋಗಾಭ್ಯಾಸದ ಭಂಗಿಗಳನ್ನು ಪ್ರತಿನಿತ್ಯವೂ ಅಭ್ಯಾಸ ಮಾಡುವುದರಿಂದ ನಮ್ಮ ದೇಹದ ಮಾಂಸಖಂಡಗಳ ನೋವು ದೂರಾಗುತ್ತದೆ ಎಂದು ಹೇಳುತ್ತಾರೆ.

ಏಕೆಂದರೆ ನಾವೆಲ್ಲ ಗಮನಿಸಿರುವ ಹಾಗೆ ಯೋಗಾಭ್ಯಾಸದ ಎಲ್ಲಾ ಭಾಗಗಳಲ್ಲಿ ನಮ್ಮ ದೇಹದ ಪ್ರತಿಯೊಂದು ಅಂಗಗಳನ್ನು ವಿಸ್ತರಿಸಲು ಪ್ರಯತ್ನಪಡುತ್ತೇವೆ. ಇದರಿಂದ ರಕ್ತ ಸಂಚಾರ ಸುಗಮವಾಗುತ್ತದೆ.

ಹಾಗಾಗಿ ಯಾವುದೇ ಬಗೆಯ ದೀರ್ಘಕಾಲದ ನೋವುಗಳು ಮಾಯವಾಗುತ್ತವೆ. ಆದರೆ ವ್ಯಾಯಾಮದಲ್ಲಿ ಮೊದಲೇ ಇರುವ ನೋವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ನಿರಂತರವಾದ ವ್ಯಾಯಾಮ ಅಭ್ಯಾಸದಿಂದ ಸುಧಾರಿಸಿಕೊಳ್ಳಲು ದೇಹಕ್ಕೆ ಸಾಕಷ್ಟು ವಿಶ್ರಾಂತಿ ಬೇಕಾಗುತ್ತದೆ.

10. ಯೋಗದಿಂದ ಉಸಿರಾಟದ ವ್ಯವಸ್ಥೆ ಉತ್ತಮಗೊಳ್ಳುತ್ತದೆ : –

ಸಾಮಾನ್ಯವಾಗಿ ಯೋಗಾಭ್ಯಾಸ ಮಾಡಬೇಕಾದರೆ ದೀರ್ಘವಾಗಿ ಉಸಿರು ತೆಗೆದುಕೊಂಡು ಉಸಿರು ಬಿಡಲು ಮುಂದಾಗುತ್ತೇವೆ. ಈ ರೀತಿ ಮಾಡುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳು ಇವೆ.

ಮುಖ್ಯವಾಗಿ ನಮ್ಮ ಉಸಿರಾಟದ ವ್ಯವಸ್ಥೆ ಒಳ್ಳೆಯ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ದೀರ್ಘಕಾಲದ ಉಸಿರಾಟದಲ್ಲಿ ನಮ್ಮ ಮಾನಸಿಕ ಆರೋಗ್ಯ ಕೂಡ ಉತ್ತಮವಾಗುತ್ತದೆ. ಇದರಿಂದ ದೇಹದ ಆಯಾಸ ದೂರಗೊಂಡು ಕ್ರಮೇಣವಾಗಿ ನಮ್ಮನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢಗೊಳಿಸುತ್ತದೆ. ಆದರೆ ವ್ಯಾಯಾಮದ ಅಭ್ಯಾಸ ಮಾಡಿದ ನಂತರ ಏದುಸಿರು ಬಿಡಬೇಕಾಗುತ್ತದೆ.

11. ಯೋಗ ನಮ್ಮನ್ನು ಶಾಂತಗೊಳಿಸುತ್ತದೆ : –

ಯೋಗಾಭ್ಯಾಸವನ್ನು ಪ್ರಶಾಂತವಾದ ವಾತಾವರಣದಲ್ಲಿ ನಾವೂ ಕೂಡ ಶಾಂತವಾಗಿ ಅಭ್ಯಾಸ ಮಾಡುವುದರಿಂದ, ನಮ್ಮ ಮನಸ್ಸಿಗೆ ಸಾಕಷ್ಟು ಶಾಂತಿ ಮತ್ತು ನೆಮ್ಮದಿ ದೊರಕುತ್ತದೆ.

ಯೋಗ ಅಭ್ಯಾಸ ಮಾಡಿದ ನಂತರ ನಮ್ಮ ಮಾನಸಿಕ ಸ್ಥಿತಿ ಮೊದಲಿಗಿಂತ ಸಾಕಷ್ಟು ಉತ್ತಮವಾಗಿ ಬದಲಾಗಿರುತ್ತದೆ. ಜೊತೆಗೆ ವ್ಯಾಯಾಮಕ್ಕೆ ಹೋಲಿಸಿದರೆ ಯೋಗ ಅಭ್ಯಾಸ ಮಾಡಲು ತುಂಬಾ ಸುಲಭ.

ವ್ಯಾಯಾಮದಂತೆ ಹಲ್ಲು ಕಿರಿದು ಕಷ್ಟಪಟ್ಟು ಭಾರ ಎತ್ತುವ ಪ್ರಮೇಯ ಯೋಗದಲ್ಲಿ ಇರುವುದಿಲ್ಲ.

12. ಮಾನಸಿಕ ಒತ್ತಡ ನಿವಾರಣೆಯಾಗುತ್ತದೆ : –

ಯೋಗ ತಜ್ಞರು ನಮ್ಮ ಮಾನಸಿಕ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಕಣ್ಣು ಮುಚ್ಚಿ ಧ್ಯಾನ ಮಾಡುವಂತಹ ಯಾವುದಾದರೂ ಒಂದು ಭಂಗಿಯನ್ನು ಪ್ರತಿದಿನ ಕಡ್ಡಾಯವಾಗಿ ಸೂಚಿಸುತ್ತಾರೆ.

ಇದು ನಮ್ಮ ಮಾನಸಿಕ ಒತ್ತಡವನ್ನು ನಿವಾರಣೆ ಮಾಡುವ ಸಲುವಾಗಿಯೇ ಇರುತ್ತದೆ. ಆದರೆ ವ್ಯಾಯಾಮದಲ್ಲಿ ನಮ್ಮ ಮಾನಸಿಕ ಒತ್ತಡವನ್ನು ನಿವಾರಣೆ ಮಾಡುವಂತಹ ಯಾವುದೇ ಭಂಗಿ ಇಲ್ಲ.

ಇತ್ತೀಚಿನ ವ್ಯಾಯಮ ಶಾಲೆಯಲ್ಲಿ ನಾವು ಗಮನಿಸಿರುವ ಹಾಗೆ ಜೋರು ಸಂಗೀತ ಮತ್ತು ಗಾಢವಾದ ಬೆಳಕು ಇರುವುದರಿಂದ ಮಾನಸಿಕವಾಗಿ ಇದರಿಂದ ಯಾವುದೇ ಲಾಭಗಳು ಉಂಟಾಗುವುದಿಲ್ಲ.

13. ಯೋಗಾಭ್ಯಾಸ ಮಾಡಲು ವಯಸ್ಸಿನ ಅಂತರವಿಲ್ಲ : –

ಯೋಗಾಭ್ಯಾಸ ಭಂಗಿಗಳನ್ನು ಚಿಕ್ಕ ವಯಸ್ಸಿನ ಮಕ್ಕಳಿಂದ ಹಿಡಿದು ವಯಸ್ಸಾದ ವೃದ್ಧರು ಕೂಡ ಸುಲಭವಾಗಿ ಮಾಡಬಹುದು.

ಅದರಲ್ಲೂ ಮುಖ್ಯವಾಗಿ ಆರೋಗ್ಯ ತಜ್ಞರು ಹೆಚ್ಚಾಗಿ ಚಿಕ್ಕ ಮಕ್ಕಳು ಮತ್ತು ವಯೋವೃದ್ಧರು ಯೋಗಾಭ್ಯಾಸ ಮಾಡಲೇಬೇಕೆಂದು ಸೂಚಿಸುತ್ತಾರೆ. ಆದರೆ ವ್ಯಾಯಮ ಹಾಗಲ್ಲ.

ಕೇವಲ ಯುವಜನತೆ ಮಾತ್ರ ವ್ಯಾಯಾಮದ ಅಭ್ಯಾಸ ಮಾಡಬಹುದು. ಪುಟ್ಟ ಮಕ್ಕಳು ಹಾಗೂ ವಯಸ್ಸಾದವರು ವ್ಯಾಯಾಮದ ಉಪಕರಣಗಳನ್ನು ಮುಟ್ಟಲು ಹೆದರುತ್ತಾರೆ.

14. ಯೋಗದಿಂದ ನಮ್ಮ ಏಕಾಗ್ರತೆ ಹೆಚ್ಚಾಗುತ್ತದೆ : –

ಯೋಗದ ಅಭ್ಯಾಸದಲ್ಲಿ ಮುಖ್ಯವಾಗಿ ನಮ್ಮ ಉಸಿರಾಟ ನಮ್ಮ ದೇಹದ ಪ್ರಸ್ತುತ ಆಕೃತಿ ಮತ್ತು ಮುಂದಿನ ಭಂಗಿಯ ಬಗ್ಗೆ ಮಾತ್ರ ನಾವು ಯೋಚಿಸಲು ಸಮಯವಿರುತ್ತದೆ.

ಹಾಗಾಗಿ ನಮ್ಮ ತಲೆಯಲ್ಲಿ ಯೋಗಾಭ್ಯಾಸ ಮಾಡುವಾಗ ಬೇರೆ ಯಾವುದೇ ಆಲೋಚನೆಗಳು ಸುಳಿಯುವುದಿಲ್ಲ. ಆದರೆ ವ್ಯಾಯಾಮ ಶಾಲೆಯಲ್ಲಿ ಇಂತಹ ಅನುಕೂಲ ಹುಡುಕಿದರೂ ಸಿಗುವುದಿಲ್ಲ.

ಎಲ್ಲಾ ಕಡೆ ಕನ್ನಡಿಗಳನ್ನು ಹಾಕಿರುವುದರಿಂದ ನಮ್ಮ ಗಮನ ನಮಗಿಂತ ಹೆಚ್ಚಾಗಿ ಬೇರೆಯವರ ಮೇಲೆಯೇ ಇರುತ್ತದೆ ಜೊತೆಗೆ ಗೋಡೆಯಲ್ಲಿ ನೇತುಹಾಕಿರುವ ದೂರದರ್ಶನದ ಮೇಲೆ ಹಾಯ್ದು ಹೋಗುತ್ತದೆ.

15. ಯೋಗಕ್ಕೆ ಯೋಗಿಗಳ ಜೀವನವೇ ಸಾಕ್ಷಿ : –

ನಾವು ಯೋಗಿಗಳನ್ನು ಹಾಗೂ ಸಾಧುಸಂತರನ್ನು ಬಹಳ ವಿರಳವಾಗಿ ನಮ್ಮ ಸಮಾಜದಲ್ಲಿ ಕಾಣುತ್ತೇವೆ. ಅಂದರೆ ಎಲ್ಲೋ ಕೆಲವರು ಮಾತ್ರ ಯೋಗಿ ಎಂಬ ಪಟ್ಟ ಪಡೆದಿರುತ್ತಾರೆ.

ಹಲವಾರು ವರ್ಷಗಳ ಧ್ಯಾನ ಮತ್ತು ಯೋಗಾಭ್ಯಾಸದ ಫಲವಾಗಿ ಯೋಗಿಗಳು ನಮ್ಮೆಲ್ಲರಿಗಿಂತ ಮೇರು ಸ್ಥಾನದಲ್ಲಿ ನಿಲ್ಲುತ್ತಾರೆ. ಇವರು ಸದಾ ಹಸನ್ಮುಖಿಯಾಗಿ ಜೀವನದಲ್ಲಿ ಹೆಚ್ಚು ಸುಖ-ಸಂತೋಷವನ್ನು ಪಡೆದಿರುತ್ತಾರೆ. ಆದರೆ ವ್ಯಾಯಾಮ ಮಾಡುವವರಿಗೆ ಇಂತಹ ಅವಕಾಶ ಸಿಗುವುದಿಲ್ಲ.

ಕೆಲವರಿಗಂತೂ ಸಂತೋಷಕ್ಕಿಂತ ಹೆಚ್ಚು ಕೋಪವೇ ಜಾಸ್ತಿ. ತಮ್ಮ ಕೋಪವನ್ನು ಕಡಿಮೆ ಮಾಡಿಕೊಳ್ಳಲು ಅವರು ವ್ಯಾಯಾಮ ಮಾಡಿದರೂ ಸಹ ಧ್ಯಾನ ಮತ್ತು ಯೋಗಾಭ್ಯಾಸ ಮಾಡಲೇಬೇಕಾಗುತ್ತದೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: