Design a site like this with WordPress.com
Get started

ಕೆಂಪು ದೈತ್ಯ ಚೀನಾ ಒಡೆದು ಚೂರಾಗಿಹೋಗಲಿದೆಯೇ???

ಚೈನಾ! ಜಗತ್ತಿನ ಅತಿ ಶಕ್ತಿಶಾಲಿ ರಾಷ್ಟ್ರಗಳಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವ ರಾಷ್ಟ್ರ. ಭೂವಿಸ್ತಾರ, ಪ್ರಾಕೃತಿಕ ಸಂಪತ್ತು, ಜನಸಂಖ್ಯೆ, ಉತ್ಪಾದನೆ, ಅಭಿವೃದ್ಧಿ ಎಲ್ಲದರಲ್ಲೂ ಜಗತ್ತಿನ ಮುಂಚೂಣಿಯಲ್ಲಿರುವ ರಾಷ್ಟ್ರ. ಕಳೆದ ಹತ್ತು ಹದಿನೈದು ವರ್ಷಗಳ ಚಿಕ್ಕ ಅವಧಿಯಲ್ಲಿ ಆರ್ಥಿಕ ಅಭಿವೃದ್ಧಿಯ ವಿಷಯದಲ್ಲಿ ವಿಶ್ವದ ಉಳಿದೆಲ್ಲ ರಾಷ್ಟ್ರಗಳನ್ನು ಹಿಂದೆ ಹಾಕಿ ದೊಡ್ಡದೊಂದು ನೆಗೆತ ನೆಗೆದ ಸಾಹಸಿ ರಾಷ್ಟ್ರ. ಕೇವಲ ಆರ್ಥಿಕ ಕ್ಷೇತ್ರದಲ್ಲಿ ಮಾತ್ರವಲ್ಲದೇ ಮಿಲಿಟರಿ ಕ್ಷೇತ್ರದಲ್ಲೂ ಅಮೆರಿಕಾದಂತ ಅಮೇರಿಕಾಕ್ಕೆ ಸಡ್ಡು ಹೊಡೆದು ನಿಂತಿರುವ ಏಷ್ಯಾದ ದೈತ್ಯ ರಾಷ್ಟ್ರ. ಇಂತಹಾ ರಾಷ್ಟ್ರ ಕಳೆದ ಕೆಲವು ವಾರಗಳಿಂದ ಭಾರತದ ಗಡಿಯಲ್ಲಿ ತಂಟೆ ತೆಗೆದು ಯುದ್ಧೋತ್ಸಾಹವನ್ನು ತೋರುತ್ತಿರುವುದು ಸಹಜವಾಗಿಯೇ ಭಾರತೀಯರಾದ ನಮಗೆ ಆತಂಕವನ್ನು ತಂದೊಡ್ಡಿದೆ. ಚೈನಾದ ಸೈನಿಕರು ಭಾರತದ ಗಡಿಯೊಳಕ್ಕೆ ನುಗ್ಗಿ ನಮ್ಮ ಸೈನಿಕರೊಂದಿಗೆ ಮುಷ್ಠಿಕಾಳಗ ಮಾಡುತ್ತಿದ್ದಾರೆ. ಚೈನಾ ತಾನು ಗಡಿಯಲ್ಲಿ ಹೆಚ್ಚುವರಿ ಸೈನಿಕರನ್ನು ನಿಯೋಜಿಸುತ್ತಿರುವುದಲ್ಲದೇ ನೇಪಾಳದಲ್ಲಿರುವ ತನ್ನ ಕೈಗೊಂಬೆ ಸರ್ಕಾರದ ಕೈಲಿ ಭಾರತದ ವಿರುದ್ಧ ಹೇಳಿಕೆಗಳನ್ನು ಕೊಡಿಸುವ ಮೂಲಕ ಭಾರತದ ವಿರುದ್ಧ ಆ ಬಡ ರಾಷ್ಟ್ರವನ್ನು ಛೂ ಬಿಡುತ್ತಿದೆ. ಗಡಿಯಲ್ಲಿ ಭಾರತ ನಡೆಸುತ್ತಿರುವ ರಸ್ತೆ ನಿರ್ಮಾಣವನ್ನು ನಿಲ್ಲಿಸಲು ಲಿಪುಲೇಕ್ ಪಾಸ್, ಕಾಲಾಪಾನಿ ಸಮೇತ ಲಿಂಪಿಯಧುರವನ್ನೂ ತನ್ನದೆಂದು ವಾದಿಸುತ್ತಿರುವ ನೇಪಾಳ ಚೀನಾ ಮಾತು ಕೇಳಿಕೊಂಡು ಹೊಸದೊಂದು ಭೂಪಟವನ್ನೇ ಬಿಡುಗಡೆ ಮಾಡಿ ಹೊಸ ವಿವಾದವನ್ನು ಹುಟ್ಟುಹಾಕಿದೆ. ಇದರ ನಡುವೆ ಚೈನಾ ಲಡಾಕ್ ಭಾಗದಲ್ಲಿ ಐದು ಸಾವಿರ ಸೈನಿಕರ ನಿಯೋಜನೆ ಮಾಡಿದೆ. ಕಾರಣವಿಲ್ಲದೇ ಗಡಿಯಲ್ಲಿ ಯುದ್ಧದ ವಾತಾವರಣವನ್ನು ನಿರ್ಮಾಣ ಮಾಡುತ್ತಿದೆ.

ಇಷ್ಟೆಲ್ಲಾ ಹಕೀಕತ್ತು ಮಾಡುತ್ತಿರುವ ಚೈನಾದ ಅಸಲಿ ಉದ್ದೇಶವೇನು? ಯುದ್ಧವೇ? ಭೂವಿಸ್ತರಣೆಯ ದಾಹವೇ? ಶಕ್ತಿಪ್ರದರ್ಶನವೇ? ಹುಚ್ಚಾಟವೇ? ವಿದೇಶಗಳಿಗೆ ನೀಡುತ್ತಿರುವ ಎಚ್ಚರಿಕೆಯೇ? ಖಂಡಿತವಾಗಿ ಇವ್ಯಾವುವೂ ಅಲ್ಲ. ಚೀನಾದ ಈ ಎಲ್ಲ ನಡೆಗಳಿಗೆ ಕಾರಣ ಚೀನಾವನ್ನು ಆಳುತ್ತಿರುವ ನಾಯಕರ ಎದೆಯಲ್ಲಿ ದಿನೇ ದಿನೇ ಹೆಪ್ಪುಗಟ್ಟುತ್ತಿರುವ ಭಯ ಎಂದರೆ ನೀವು ನಂಬುತ್ತೀರಾ? ಖಂಡಿತಾ ನಂಬಲೇಬೇಕು! ಹೌದು ಇಷ್ಟು ದಿನ ತಾನು ಆಡಿದ್ದೇ ಆಟ ಅಂತ ಅಂಕುಶವಿಲ್ಲದ ಆನೆಯಂತೆ ಮೂಗುದಾರವಿಲ್ಲದ ಗೂಳಿಯಂತೆ ಮೆರೆದಾಡುತ್ತಿದ್ದ ಚೈನಾದ ಕಮ್ಯುನಿಸ್ಟ್ ನಾಯಕರ ಎದೆ ಇಂದು ಹಿಂದೆಂದಿಗಿಂತಲೂ ಹೆಚ್ಚು ತೀವ್ರ ವೇಗದಲ್ಲಿ ಢವಗುಟ್ಟುತ್ತಿದೆ. ತಮ್ಮ ದೇಶಕ್ಕೆ ಮುಂದೊದಗಲಿರುವ ಭೀಕರ ಭವಿಷ್ಯವನ್ನು ನೆನೆ ನೆನೆದು ನಿದ್ರೆ ಬಾರದೇ ಹೊರಳಾಡುತ್ತಿದ್ದಾರೆ. ಬಂದ ಅರೆಬರೆ ನಿದ್ರೆಯಲ್ಲಿ ಕಾಣುವ ಕನಸಲ್ಲೂ ಬೆಚ್ಚಿ ಬೆಚ್ಚಿ ಬೀಳುತ್ತಿದ್ದಾರೆ. ಒಂದಲ್ಲ ಎರಡಲ್ಲ ಹತ್ತಾರು ಭಯಗಳು ಒಟ್ಟಿಗೆ ಸೇರಿಕೊಂಡು ಚೈನಾ ಇಂದು ಮಿಸುಕಾಡದಂತೆ ಲಾಕ್ ಆಗಿದೆ. ಜನರ ಗುಂಪಿನಲ್ಲಿದ್ದಾಗ ಪ್ಯಾಂಟಿನೊಳಗೆ ಇರುವೆ ಹೊಕ್ಕಿದಂತಾಗಿದೆ ಚೈನಾದ ಸ್ಥಿತಿ. ಮುಟ್ಟುವಂತಿಲ್ಲ ಮಾತಾಡುವಂತಿಲ್ಲ! ಇರುವೆ ಕಚ್ಚಿ ಕಚ್ಚಿ ತಿನ್ನುತ್ತಿದ್ದರೂ ತನಗೇನೂ ಆಗಿಲ್ಲ ಎಂಬಂತೆ ನಟಿಸುವ ದುರ್ಗತಿ ಇಂದು ಚೈನಾದ್ದಾಗಿದೆ. ಇಷ್ಟಕ್ಕೂ ಚೀನಾದ ಈ ಪರಿಯ ಮಹಾಭಯಕ್ಕೆ ಕಾರಣವೇನು ಅಂತ ಕೇಳ್ತೀರಾ? ಹೇಳ್ತೀನಿ ಕೇಳಿ.

ಅಮೇರಿಕಾವನ್ನು ಹಿಂದೆ ಹಾಕಿ ಜಗತ್ತಿನ ಸೂಪರ್ ಪವರ್ ಸ್ಥಾನದಲ್ಲಿ ಮೆರೆಯುವ ಕನಸು ಕಾಣುತ್ತಿದ್ದ ಚೈನಾ ಎಂಬ ಬೃಹತ್ ರಾಷ್ಟ್ರ ಇನ್ನು ಮುಂದೆ ಹತ್ತರಲ್ಲಿ ಒಂದು ರಾಷ್ಟ್ರವಾಗಿ ಉಳಿದು ಅಷ್ಟರಲ್ಲೇ ತೃಪ್ತಿಪಟ್ಟುಕೊಳ್ಳಬೇಕಾಗುತ್ತದೆ. ಹಿಂದೊಮ್ಮೆ ಶೀತಲ ಸಮರದ ಅಂತ್ಯದಲ್ಲಿ ಕಮ್ಯುನಿಸ್ಟ್ ರಾಷ್ಟ್ರವಾಗಿದ್ದ ಯುಎಸ್ಎಸ್ಆರ್ ಗೆ ಯಾವ ಗತಿ ಬಂತೋ ಅದೇ ಗತಿ ಇಂದು ಕಮ್ಯುನಿಸ್ಟ್ ರಾಷ್ಟ್ರ ಚೈನಾಕ್ಕೂ ಬರಲಿದೆ. ಕರೋನಾನಂತರ ಬದಲಾಗಬಹುದೆಂದು ಯೋಚಿಸಿದ್ದ ವಿಶ್ವಭೂಪಟದ ಮೊಟ್ಟಮೊದಲ ಬದಲಾವಣೆ ಚೈನಾದ ಪತನವೇ ಆಗಿರಲಿದೆ. ಅದರರ್ಥ ಚೈನಾ ಇನ್ನು ಕೆಲವೇ ದಿನಗಳಲ್ಲಿ ಒಡೆದು ಚೂರಾಗಲಿದೆ!

ಈ ಮಾತನ್ನು ಹೇಳಲು ಅನೇಕ ಸಮರ್ಥ ಕಾರಣಗಳು ಇಂದು ಕಣ್ಣಮುಂದಿವೆ.

ಕಾರಣ ನಂ 1 – ಒಳಗೊಳಗೇ ಕುಸಿಯುತ್ತಿರುವ ಚೈನಾದ ಆರ್ಥಿಕ ವ್ಯವಸ್ಥೆ

ಚೀನಾದ ಬಹುದೊಡ್ಡ ಶಕ್ತಿ ಅದರ ಅರ್ಥವ್ಯವಸ್ಥೆ. ಜಗತ್ತಿನ ಅತಿ ದೊಡ್ಡ ಉತ್ಪಾದಕ ರಾಷ್ಟ್ರ ಚೈನಾ. ಕಮ್ಯುನಿಸ್ಟ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಚೈನಾ ತನ್ನಲ್ಲಿರುವ ಅಪಾರ ಮಾನವ ಸಂಪನ್ಮೂಲವನ್ನು ಇನ್ನಿಲ್ಲದಂತೆ ದುಡಿಸಿಕೊಂಡು ಅತಿದೊಡ್ಡ ದುಡಿಮೆಗಾರ ರಾಷ್ಟ್ರವಾಗಿ ಬೆಳೆದು ನಿಂತಿತು. ಕಡಿಮೆ ಕೂಲಿಗೆ ಹೆಚ್ಚು ಉತ್ಪಾದನೆಯಾಗುವ ಅವಕಾಶವಿರುವ ಚೈನಾದಲ್ಲಿ ಜಗತ್ತಿನ ಬಹುತೇಕ ಕಂಪನಿಗಳು ಬಂದು ಯಥೇಚ್ಛ ಬಂಡವಾಳ ಹೂಡಿದವು. ಇದರ ಪರಿಣಾಮ ಜಗತ್ತಿನ ಬಡ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳು ಮುಂದುವರಿಯಲಾಗದೇ ಯಥಾ ಸ್ಥಿತಿಯಲ್ಲಿಯೇ ಉಳಿದರೆ ಶ್ರೀಮಂತ ರಾಷ್ಟ್ರಗಳು ಇನ್ನಿಲ್ಲದಂತೆ ಸೋಮಾರಿ ಮತ್ತು ಪರಾವಲಂಬಿಯಾದವು. ಇಂದು ಚೈನಾ ಮೇಲೆ ಜಗತ್ತು ಯಾವ ಪರಿ ಅವಲಂಬಿತವಾಗಿವೆಯೆಂದರೆ ಚೈನಾ ಜೊತೆ ವ್ಯಾಪಾರ ಸಂಬಂಧ ಕಳೆದುಕಳ್ಳುವ ಯಾವ ರಾಷ್ಟ್ರವೂ ತನ್ನ ಆರ್ಥಿಕ ಸ್ಥಿತಿ ಕುಸಿಯದಂತೆ ಕಾಪಾಡಿಕೊಳ್ಳುವ ಸಾಮರ್ಥ್ಯ ಹೊಂದಿಲ್ಲ. ಮೊದಮೊದಲು ಅಮೆರಿಕಾಕ್ಕೆ ಸಡ್ಡು ಹೊಡೆದು ವಿಶ್ವದ ದೊಡ್ಡಣ್ಣನಾಗುವ ಯಾವ ಇರಾದೆಯೂ ತನಗಿಲ್ಲವೆಂದು ತೋರಿಸಿಕೊಂಡ ಚೀನಾ ಹೊರಜಗತ್ತಿನೊಂದಿಗೆ ವ್ಯಾಪಾರ ಅಭಿವೃದ್ಧಿಯ ಮೂಲಕ ಕೇವಲ ತನ್ನ ದೇಶವನ್ನು ಒಳಗಿನಿಂದ ಶಕ್ತಿಶಾಲಿ ಮಾಡುವ ಕಡೆಗೆ ಮಾತ್ರ ಗಮನಕೊಟ್ಟಂತೆ ಕಾಣುತ್ತಿತ್ತು. ಇದರಿಂದ ತನ್ನ ವಿಶ್ವನಾಯಕ ಪಟ್ಟಕ್ಕೇನೂ ತೊಂದರೆ ಇಲ್ಲದಿದ್ದುದರಿಂದ ಮತ್ತು ತನಗೂ ಲಾಭವಿದ್ದುದರಿಂದ ಅಮೇರಿಕಾ ತಲೆಕೆಡಿಸಿಕೊಳ್ಳಲುಹೋಗಲಿಲ್ಲ.
ಆದರೆ ಯಾವಾಗ ಜಗತ್ತಿನ ಮೇಲೆ ಚೀನಾದ ಹಿಡಿತ ಬಲವಾಗುತ್ತಿರುವ ಲಕ್ಷಣ ಕಾಣಲು ಆರಂಭವಾಯಿತೋ ಅಮೆರಿಕಾ ಪತರಗುಟ್ಟಿಹೋಯಿತು. ಆಫ್ರಿಕಾ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಚೈನಾದ ಯಥೇಚ್ಛ ಬಂಡವಾಳ ಹೂಡಿಕೆ, ಪಾಕಿಸ್ತಾನ, ನೇಪಾಳ, ಶ್ರೀಲಂಕಾ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳಿಗೆ ಚೀನಾ ನೀಡಿದ ಬೃಹತ್ ಪ್ರಮಾಣದ ಸಾಲ ಇವೆಲ್ಲವೂ ಅಮೇರಿಕಾಕ್ಕೆ ಮುಂದಾಗಲಿರುವ ಬಹುದೊಡ್ಡ ಕೇಡಿನ ಲಕ್ಷಣಗಳಾಗಿ ಗೋಚರಿಸಿದವು. ಆಗ ಆರಂಭವಾಗಿದ್ದೇ ಚೀನಾ ಮತ್ತು ಅಮೇರಿಕಾದ ವ್ಯಾಪಾರ ಯುದ್ಧ. ಟ್ರಂಪ್ ಎಷ್ಟು ಪ್ರಯತ್ನಿಸಿದರೂ ಈ ಯುಧ್ಧದಲ್ಲಿ ಚೀನಾವನ್ನು ಮಣಿಸಲು ಸಾಧ್ಯವಾಗಿರಲಿಲ್ಲ. ಏಕೆಂದರೆ ಸ್ವತಃ ಅಮೆರಿಕಾ ಚೈನಾದ ಮೇಲೆ ಇನ್ನಿಲ್ಲದಂತೆ ಅವಲಂಬಿತವಾಗಿಬಿಟ್ಟಿತ್ತು. ಹೀಗಾಗಿ ಹಾವು ಸಾಯಲಿಲ್ಲ ಕೋಲು ಮುರಿಯಲಿಲ್ಲ ಎಂಬಂತಿತ್ತು ಈ ಶೀತಲ ಯುದ್ಧ. ಹೇಗಾದರೂ ಮಾಡಿ ವ್ಯಾಪಾರ ಕ್ಷೇತ್ರದಲ್ಲಿ ಚೀನಾದ ಪಾರುಪತ್ಯವನ್ನು ಮುರಿಯಬೇಕೆಂದು ಹವಣಿಸುತ್ತಿದ್ದ ಅಮೇರಿಕಾಕ್ಕೆ ಅದೃಷ್ಟವಶಾತ್(!?) ಇಂದು ಕರೋನಾ ಒಂದು ದೊಡ್ಡ ಅಸ್ತ್ರವಾಗಿ ಸಿಕ್ಕಿದೆ. ಚೀನಾ ಉದ್ದೇಶಪೂರ್ವಕವಾಗಿ ಕರೋನಾ ವೈರಸ್ ಅನ್ನು ಜಗತ್ತಿಗೆ ಹರಡಿಸಿತು ಅಥವಾ ಹರಡಲು ಅವಕಾಶ ಮಾಡಿಕೊಟ್ಟಿತು ಎಂಬ ಆರೋಪದೊಂದಿಗೆ ಚೀನಾದ ಮೇಲೆ ಜಗತ್ತಿನ ಕೆಂಗಣ್ಣು ಬೀಳುವಂತೆ ನೋಡಿಕೊಳ್ಳುತ್ತಿದೆ. ಬಹುಪಾಲು ಅದರಲ್ಲಿ ಯಶಸ್ವಿಯೂ ಆಗಿದೆ. ಆಸ್ಟ್ರೇಲಿಯಾ, ಆಫ್ರಿಕಾದ ಕೆಲವು ರಾಷ್ಟ್ರಗಳೂ ಸೇರಿದಂತೆ ಜಗತ್ತಿನ ಅನೇಕ ರಾಷ್ಟ್ರಗಳು ಮುಕ್ತವಾಗಿ ಚೀನಾವನ್ನು ಟೀಕಿಸಲಾರಂಭಿಸಿವೆ. ಮೊನ್ನೆ ಮೊನ್ನೆಯಷ್ಟೇ ಜಗತ್ತಿನ 130 ಕ್ಕೂ ಹೆಚ್ಚು ರಾಷ್ಟ್ರಗಳು ಕರೋನಾ ಸೋಂಕಿನ ಹರಡುವಿಕೆಯ ಕಾರಣದ ಕುರಿತಾಗಿ ಪ್ರಾಮಾಣಿಕ ತನಿಖೆ ನಡೆಸಬೇಕೆಂದು ಒಕ್ಕೋರಲಿನಿಂದ ಚೀನಾವನ್ನು ಒತ್ತಾಯಿಸಿವೆ. ಹೀಗಾಗಿ ಚೀನಾದೊಂದಿಗೆ ಜಗತ್ತಿನ ವ್ಯಾಪಾರ ಸಂಬಂಧ ಹಿಂದಿನಂತೆ ಉಳಿದುಕೊಳ್ಳುವುದು ಸಾಧ್ಯವಿಲ್ಲ. ಅದಾಗಲೇ ಅನೇಕ ಬಹುರಾಷ್ಟ್ರೀಯ ಕಂಪನಿಗಳು ಚೀನಾದಿಂದ ಕಾಲುಕೀಳುತ್ತಿವೆ. ಚೀನಾಕ್ಕೆ ಪರ್ಯಾಯವಾಗಿ ಕಾಣಬಲ್ಲಂಥ ರಾಷ್ಟ್ರಗಳ ಹುಡುಕಾಟದಲ್ಲಿವೆ. ಅಂತಹಾ ಕಂಪನಿಗಳಿಗೆ ಭಾರತ ಸೇರಿದಂತೆ ಹತ್ತಾರು ರಾಷ್ಟ್ರಗಳು ಕೆಂಪು ಹಾಸಿನ ಸ್ವಾಗತ ನೀಡುತ್ತಿರುವುದು ಚೀನಾಕ್ಕೆ ಬಹುದೊಡ್ಡ ಹೊಡೆತ ನೀಡಿದೆ. ಇದರ ಜೊತೆಗೆ ವಿಶ್ವದ ಮುಂಚೂಣಿ ರಾಷ್ಟ್ರಗಳು ಚೀನಾದ ಮೇಲೆ ತಮ್ಮ ಅವಲಂಬನೆಯನ್ನು ಕ್ರಮೇಣ ಕಡಿಮೆ ಮಾಡಿಕೊಳ್ಳುವತ್ತ ದಾಪುಗಾಲಿಟ್ಟಿವೆ. ಹೀಗಾಗಿ ವಿಶ್ವಕ್ಕೆ ತನ್ನ ಮೇಲಿದ್ದ ವಿಶ್ವಾಸಾರ್ಹತೆಯನ್ನೇ ಕಳೆದುಕೊಂಡ ಚೈನಾ ದಿನೇ ದಿನೇ ಬೆಂದು ಬಸವಳಿಯುತ್ತಿದೆ. ಒಂದು ಕಡೆ ವಿದೇಶಗಳಲ್ಲಿ ತಾನು ತೊಡಗಿಸಿರುವ ಬೃಹತ್ ಮೊತ್ತದ ಬಂಡವಾಳ, ನೀಡಿರುವ ಬೃಹತ್ ಪ್ರಮಾಣದ ಸಾಲ, ತನ್ನ ದೇಶದಲ್ಲಿ ಆರಂಭಿಸಿರುವ ದೀರ್ಘಕಾಲೀನ ಬೃಹತ್ ಯೋಜನೆಗಳು, ರಫ್ತುಪ್ರಮಾಣದ ಗಣನೀಯ ಕಡಿತ ಈ ಎಲ್ಲವೂ ಚೀನಾವನ್ನು ಇನ್ನಿಲ್ಲದಂತೆ ಕಾಡಲಾರಂಭಿಸಿದೆ. ಇದರೊಂದಿಗೆ ಕರೋನಾನಂತರ ಎದುರಾಗಿರುವ ಯುದ್ಧಭೀತಿಯಿಂದ ಹೆಚ್ಚಾಗಿರುವ ಮಿಲಿಟರಿ ವೆಚ್ಚ, ಲಾಕ್ ಡೌನ್ ಪರಿಣಾಮ ಇತ್ಯಾದಿಗಳಿಂದ ಸಹಾ ಬಹುದೊಡ್ಡ ಆರ್ಥಿಕ ಕುಸಿತವೊಂದಕ್ಕೆ ಚೀನಾದಲ್ಲಿ ವೇದಿಕೆ ಸಜ್ಜಾಗಿದೆ.

ಕಾರಣ ನಂ 2 – ಆಂತರಿಕ ಯುದ್ಧ ಮತ್ತು ಬಂಡಾಯ

ಚೀನಾ ಅಸಲಿಗೆ ಇಂದು ನಾವು ನೀವು ಭೂಪಟದಲ್ಲಿ ನೋಡುತ್ತಿರುವಂಥಾ ಬೃಹತ್ ರಾಷ್ಟ್ರವಲ್ಲ. ವಾಸ್ತವವಾಗಿ ಅನೇಕ ರಾಷ್ಟ್ರಗಳ ಭೂಮಿಯನ್ನು ನುಂಗಿ ನೀರುಕುಡಿದು ಹೆಬ್ಬಾವಿನ ಹಾಗೆ ಕಾಣುತ್ತಿದೆ ಚೀನಾ. ತನ್ನ ಸೈನಿಕ ಬಲದಿಂದ ಅಕ್ಕ ಪಕ್ಕದ ರಾಷ್ಟ್ರಗಳನ್ನು ವಶಪಡಿಸಿಕೊಂಡಿರುವ ಚೀನಾ ಅದೇ ಸೈನಿಕರ ಬಂದೂಕಿನ ಬಲದಿಂದ ತನ್ನದಲ್ಲದ ಭೂಭಾಗವನ್ನು ಆಳುತ್ತಿದೆ. ಆದರೆ ಗಡಿಗಳನ್ನು ದೀರ್ಘಕಾಲ ಉಳಿಸಿಕೊಳ್ಳುವುದು ಕೇವಲ ಬಂದೂಕಿನ ಬಲದಿಂದ ಮಾತ್ರ ಸಾಧ್ಯವಿಲ್ಲವಲ್ಲ. ಭೌಗೋಳಿಕ ಗಡಿಗಳ ಅಸ್ತಿತ್ವ ಇರಬೇಕು. ಆದರೆ ಇಂದಿನ ಚೈನಾ ಗಡಿಗಳಲ್ಲಿ‌ ಈ ವ್ಯವಸ್ಥೆ ಇಲ್ಲ. ಚೈನಾದ ಭೌಗೋಳಿಕ ಗಡಿ ಕೇವಲ ಚೀನಾದ ದಕ್ಷಿಣ ಆಗ್ನೇಯ ಭಾಗವಷ್ಟೇ ಆಗಿದ್ದು ಉಳಿದವು ಬಲವಂತವಾಗಿ ಚೀನಾದೊಂದಿಗೆ ಉಳಿದುಕೊಂಡಿವೆ. ಚೈನಾದ 150 ಕೋಟಿ ಜನರಲ್ಲಿ 90% ಗೂ ಅಧಿಕ ಜನ ಚೀನಾದ ಅರ್ಧಕ್ಕಿಂತಲೂ ಕಡಿಮೆಯಾಗಿರುವ ದಕ್ಷಿಣ ಆಗ್ನೇಯ ಭೂಪ್ರದೇಶದಲ್ಲಿದೆ ಎಂದರೆ ಅಸಲಿ ಚೈನಾ ಎಷ್ಟಿದೆ ಎಂದು ನೀವು ಅರ್ಥ ಮಾಡಿಕೊಳ್ಳಬಹುದು. (ಚಿತ್ರ ನೋಡಿ) ಹಾಗಿದ್ದರೆ ಚೀನಾದೊಳಗಿರುವ ಆದರೆ ಚೀನಾದ್ದಲ್ಲದ ಇನ್ನುಳಿದ ರಾಷ್ಟ್ರಗಳು ಯಾವುವು?

  1. ಟಿಬೆಟ್ – ಗೂಗಲ್ ಅರ್ಥ್ ನಲ್ಲಿ ನೋಡಿದರೆ ಹಿಮಾಲಯದ ಮೇಲ್ಭಾಗದಲ್ಲಿ ಇಡೀ ಜಗತ್ತಿನ ಅತಿ ಎತ್ತರದ ಒಂದು ಪ್ರಸ್ಥಭೂಮಿ ಕಾಣುತ್ತದೆ. ಮುಗಿಲು ಮುಟ್ಟುವ, ಸದಾಕಾಲ ಮಂಜಿನಿಂದಾವೃತವಾಗಿರುವ ಅನೇಕ ಪರ್ವತಗಳಿಗೂ ಅದರಲ್ಲಿ ಹುಟ್ಟುವ ಅನೇಕ ನದಿಗಳಿಗೂ ಆವಾಸಸ್ಥಾನವಾಗಿರುವ ಈ ಭೂಮಿಯೇ ಟಿಬೆಟ್. ಬೌಧ್ದ ಧರ್ಮಕ್ಕೆ ಸೇರಿದ ಇಲ್ಲಿನ ಜನ ಅಂತರ್ಮುಖಿಗಳು, ಆಧ್ಯಾತ್ಮಿಕ ಸಾಧಕರು, ಶಾಂತಿಪ್ರಿಯರು. ಟಿಬೆಟಿಯನ್ನರ ಈ ಶಾಂತ ಗುಣವನ್ನೇ ಬಂಡವಾಳ ಮಾಡಿಕೊಂಡ ಚೀನಾ 1962 ರಲ್ಲಿ ತನ್ನ ಸೈನ್ಯವನ್ನು ನುಗ್ಗಿಸಿ ಈ ಬೃಹತ್ ಭೂಭಾಗವನ್ನು ವಶಪಡಿಸಿಕೊಂಡಿತು. ಅಡ್ಡಬಂದವರ ಹತ್ಯಾಕಾಂಡ ನಡೆಸಿತು. ಇದರಿಂದ ಬೆದರಿದ ಟಿಬೆಟಿಯನ್ ರ ಪರಮೋಚ್ಛ ಧರ್ಮಗುರು ದಲೈಲಾಮಾ ಮತ್ತವರ ಶಿಷ್ಯರೂ ಸೇರಿದಂತೆ ಸಾವಿರಾರು ಜನ ಭಾರತಕ್ಕೆ ವಲಸೆ ಬಂದು ಆಶ್ರಯ ಪಡೆದರು. ದೇಶಭ್ರಷ್ಟವಾದ ಟಿಬೆಟಿಯನ್ ಸರ್ಕಾರ ಭಾರತದಲ್ಲಿ ಆಶ್ರಯ ಪಡೆಯಿತು. ಅಂದಿನಿಂದ ಇಂದಿನವರೆಗೂ ಟಿಬೆಟಿಯನ್ ಭೂಮಿಯನ್ನು ಸಂಪೂರ್ಣವಾಗಿ ವಶಪಡಿಸಿಕೊಂಡು ಅವರ ಹೋರಾಟವನ್ನು ಉಗ್ರವಾಗಿ ಹತ್ತಿಕ್ಕುವ ಕಾರ್ಯವನ್ನು ಚೈನಾ ಮಾಡುತ್ತಿದೆ. ಟಿಬೆಟಿಯನ್ ಸ್ವಾತಂತ್ರ್ಯ ಹೋರಾಟಗಾರರ ಕಗ್ಗೊಲೆ ನಡೆಯುತ್ತಿದೆ. ಭಾರತಕ್ಕೆ ವಲಸೆ ಬಂದಿರುವ ಟಿಬೆಟಿಯನ್ ರ ಮೇಲೂ ಆಗಾಗ ಚೀನಾ ಕೆಂಗಣ್ಣು ಬೀರುತ್ತದೆ. ಟಿಬೆಟ್ ಗೆ ವಿಶ್ವಸಂಸ್ಥೆ ಸೇರಿದಂತೆ ಯಾವುದೇ ರಾಷ್ಟ್ರವೂ ಸಹಾನುಭೂತಿ ತೋರದಂತೆ ನೋಡಿಕೊಳ್ಳುತ್ತಿದೆ. ಹೊರ ಜಗತ್ತಿಗೆ ಗೊತ್ತಾಗದಂತೆ ಬಹುಸಂಖ್ಯೆಯ ಚೈನೀಯರನ್ನು ಟಿಬೆಟ್ ಗೆ ಹೋಗಿ ನೆಲೆಸುವಂತೆ ಮಾಡಲಾಗುತ್ತದೆ. ನೂರಕ್ಕೆ ತೊಂಬತ್ತರಷ್ಟು ಬೌದ್ಧ ವಿಹಾರಗಳನ್ನು, ಗುರುಕುಲಗಳನ್ನು ನೆಲಸಮ ಮಾಡಲಾಗಿದೆ. ಬೌದ್ಧ ಸನ್ಯಾಸಿ ಸನ್ಯಾಸಿನಿಯರನ್ನು ಕೊಲ್ಲಲಾಗಿದೆ. ನಿರಂತರ ಮಾನವ ಹಕ್ಕುಗಳ ದಮನ ಕಾರ್ಯ ನಡೆಸುತ್ತಿದೆ. ಆದರೆ ಕರೋನಾನಂತರದ ನಾಟಕೀಯ ಬೆಳವಣಿಗೆಗಳಲ್ಲಿ ಟಿಬೆಟ್ ನ ಸ್ವಾತಂತ್ರ್ಯದ ಆಸೆ ಗರಿಗೆದರುತ್ತಿದೆ. ವಿದೇಶಗಳಲ್ಲಿ ಆಶ್ರಯ ಪಡೆದಿರುವ ಟಿಬೆಟಿಯನ್ ರ ರಾಜತಾಂತ್ರಿಕ ಚಟುವಟಿಕೆಗಳು ಗರಿಗೆದರಲಾರಂಭಿಸಿದೆ. ಅಮೆರಿಕಾದ ಸಂಸತ್ತು ಟಿಬೆಟ್ ಅನ್ನು ಸ್ವತಂತ್ರ ರಾಷ್ಟ್ರವೆಂದು ಒಪ್ಪಿಕೊಳ್ಳುವ ಮಸೂದೆಯನ್ನು ಪಾಸು ಮಾಡಲು ಕೆಲವೇ ಹಂತಗಳು ಬಾಕಿ ಇವೆ. ಹೀಗಾಗಿ ಒಂದು ವೇಳೆ ಚೈನಾ ಪತನವಾದರೆ ಟಿಬೆಟ್ ಎಂಬ ರಾಷ್ಟ್ರ ಪ್ರಪಂಚದ ಭೂಪಟಕ್ಕೆ ಹೊಸದಾಗಿ ಸೇರ್ಪಡೆಯಾಗಲಿದೆ. ಹಾಗೆ ನೋಡಿದರೆ ಭಾರತಕ್ಕೆ ಇದರಿಂದ ಅತ್ಯಂತ ಹೆಚ್ಚು ಲಾಭ. ಭೂತಾನ್ ನಂತೆ ಒಂದು ಸಾಂಸ್ಕೃತಿಕ ಗೆಳೆಯನಂಥಾ ಅಥವಾ ಸಹೋದರನಂಥಾ ಒಂದು ರಾಷ್ಟ್ರ ನೆರೆಹೊರೆಯಾದರೆ, ಚೈನಾ ಎಂಬ ದುಷ್ಟ ರಾಷ್ಟ್ರದೊಂದಿಗೆ ನಮ್ಮ ದೇಶ ಗಡಿಯನ್ನೇ ಹಂಚಿಕೊಂಡಿರುವುದಿಲ್ಲ.
  2. ತೈವಾನ್ – ಅಧಿಕೃತವಾಗಿ ಚೈನಾದ ಅಂಕೆಯಲ್ಲಿ ಇಲ್ಲದಿದ್ದರೂ ವಿಶ್ವಸಂಸ್ಥೆ ಮತ್ತು ವಿಶ್ವದ ಇತರ ರಾಷ್ಟ್ರಗಳಿಂದ ಗುರುತಿಸಲ್ಪಡದ ಕಾರಣ ಅತಂತ್ರವಾಗಿ ಉಳಿದಿರುವ ಒಂದು ಬಲಾಢ್ಯ ರಾಷ್ಟ್ರ. ಸ್ವಂತ ಸೈನ್ಯ ಬಲ, ಆಡಳಿತ ವ್ಯವಸ್ಥೆ, ಶ್ರೇಷ್ಠ ಅರ್ಥ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವ ಸರ್ಕಾರ ಹೊಂದಿರುವ ಈ ರಾಷ್ಟ್ರ ಚೈನಾಕ್ಕೆ ಇಂದು ಮಗ್ಗುಲ ಮುಳ್ಳಾಗಿದೆ. ಈ ರಾಷ್ಟ್ರವನ್ನು ದಮನಿಸಲು ಚೈನಾ ನೂರೆಂಟು ತಂತ್ರವನ್ನು ಮಾಡಿದರೂ ಇದುವರೆಗೂ ಜಯಸಾಧಿಸಲಾಗಿಲ್ಲ. ತೈವಾನ್ ತನ್ನ ಅಸ್ತಿತ್ವವನ್ನು ಬಲವಾಗಿಯೇ ಉಳಿಸಿಕೊಂಡಿದೆ. 1949 ರಲ್ಲಿ ನಡೆದ ಸಿವಿಲ್ ವಾರ್ ನಲ್ಲಿ ಮಾವೋ ನೇತೃತ್ವದ ಕಮ್ಯುನಿಸ್ಟ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಕುಮಿಟಾಂಗ್ ಪಕ್ಷದ ಸದಸ್ಯರು ಚೀನಾದಿಂದ ತೈವಾನ್ ದ್ವೀಪಕ್ಕೆ ಹೋಗಿ ನೆಲೆಸಿದರು. ಅಲ್ಲೇ ಸರ್ಕಾರ ರಚಿಸಿ ತಮ್ಮದೇ ಅಧಿಕೃತ ಚೈನಾ ಎಂದರು. ಮೊದಮೊದಲು ವಿಶ್ವ ಸಮುದಾಯ ಈ ಸರ್ಕಾರಕ್ಕೆ ಮಾನ್ಯತೆ ನೀಡಿ ಗುರುತಿಸಿದರೂ ನಂತರದ ದಿನಗಳಲ್ಲಿ ಚೈನಾದ ಪ್ರಭಾವದಿಂದಾಗಿ ತೈವಾನ್ ಅನ್ನು ಕಡೆಗಣಿಸಿತು. 1971 ರಲ್ಲಿ ತೈವಾನ್ ಗೆ ಬದಲು ಇಂದಿನ ಚೀನಾವನ್ನು ವಿಶ್ವಸಂಸ್ಥೆಯಲ್ಲಿ ಅಧಿಕೃತವಾಗಿ ಗುರುತಿಸಲಾಯಿತು. ಆದರೆ ಏನೇ ಆದರೂ ಅಂದಿನಿಂದ ಇಂದಿನವರೆಗೂ ತೈವಾನ್ ತನ್ನ ಪ್ರತ್ಯೇಕತೆಯ ಹೋರಾಟವನ್ನು ಬಿಟ್ಟಿಲ್ಲ. ಚೀನಾದ ಮಗ್ಗುಲಲ್ಲೇ ಪುಟ್ಟ ದ್ವೀಪವಾಗಿದ್ದರೂ ಆರ್ಥಿಕ ಅಭಿವೃದ್ಧಿಯಲ್ಲಿ ಜಗತ್ತಿನ ಅಗ್ರಪಂಕ್ತಿಯಲ್ಲಿದ್ದು ಏಷ್ಯನ್ ಟೈಗರ್ ಎನಿಸಿಕೊಂಡು ಸ್ವಾವಲಂಬಿಯಾಗಿದೆ. ಇಷ್ಟಾದರೂ ಜಗತ್ತು ಚೈನಾಕ್ಕೆ ಹೆದರಿಕೊಂಡು ಈ ರಾಷ್ಟ್ರದ ಸಾರ್ವಭೌಮತ್ವವನ್ನು ಗುರುತಿಸುತ್ತಿಲ್ಲ. ಆದರೆ ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ಪ್ರಜಾಪ್ರಭುತ್ವ ಮಾದರಿಯಲ್ಲಿ ಆರಿಸಿ ಬಂದ ತೈವಾನ್ ನ ಡೆಮಾಕ್ರಟಿಕ್ ಪ್ರೊಗ್ರೆಸಿವ್ ಪಾರ್ಟಿಯ ಅಧ್ಯಕ್ಷೆ ಸೈ ಇಂಗ್ ವೆನ್ ತನ್ನ ಜನರಲ್ಲಿ ಸ್ವತಂತ್ರ ಸಾರ್ವಭೌಮ ತೈವಾನ್ ನ ಕನಸನ್ನು ಇನ್ನಷ್ಟು ಗಟ್ಟಿಗೊಳಿಸುತ್ತಿದ್ದಾರೆ. ಒಂದು ವೇಳೆ ತೈವಾನ್ ಅಧಿಕೃತವಾಗಿ ಸ್ವತಂತ್ರಗೊಂಡರೆ ಚೈನಾಕ್ಕೊಂದು ಬಿಗಿಯಾದ ಲಗಾಮು ಬೀಳುತ್ತದೆ.
  3. ಉಯ್ಘರ್ ಮುಸ್ಲಿಮರ ಗ್ಸಿನ್ಸಿಯಾಂಗ್ ಅಥವಾ ಪೂರ್ವ ತುರ್ಕಿಸ್ತಾನ – ಚೀನಾದ ಉತ್ತರ ದಿಕ್ಕಿಗಿರುವ ಈ ಭಾಗ ವಿಸ್ತಾರದಲ್ಲಿ ಜರ್ಮನಿಗಿಂತಲೂ ನಾಲ್ಕುಪಟ್ಟು ದೊಡ್ಡದಾಗಿದ್ದು, ಟರ್ಕಿಕ್ ಭಾಷೆ ಮಾತನಾಡುವ ಉಯ್ಘರ್ ಮುಸ್ಲಿಮರು ಇಲ್ಲಿ ವಾಸಿಸುತ್ತಿದ್ದಾರೆ. ಹಿಂದೆ ಇದೊಂದು ಚೀನಾದಿಂದ ಪ್ರತ್ಯೇಕವಾದ ರಾಜ್ಯವಾಗಿತ್ತು. 1949ರಲ್ಲಿ ಚೈನಾದ ಕಮ್ಯುನಿಸ್ಟ್ ಪಾರ್ಟಿ ಇದನ್ನು ಪೂರ್ಣವಾಗಿ ವಶಪಡಿಸಿಕೊಂಡಿತು. ಅಂದಿನಿಂದಲೂ ಉಯ್ಘರ್ ಗಳ ಪ್ರತ್ಯೇಕ ಅಸ್ತಿತ್ವವನ್ನು ನಾಶಮಾಡಲು ಬಯಸಿದ್ದ ಚೈನಾ 9/11 ರಲ್ಲಿ ಅಮೆರಿಕಾದ ಮೇಲೆ ಅಲ್ ಖೈದಾ ನಡೆಸಿದ ವೈಮಾನಿಕ ದಾಳಿಯ ನೆಪವನ್ನು ಇಟ್ಟುಕೊಂಡು ತನ್ನ ದಮನ ಕಾರ್ಯವನ್ನು ತೀವ್ರಗೊಳಿಸಿತು. ಗ್ಸಿ ಜಿನ್ಪಿಂಗ್ ಅಧಿಕಾರಕ್ಕೆ ಬಂದಮೇಲಂತು ಇಲ್ಲಿ ಚೈನಾದ ಹಿಡಿತ ಇನ್ನಷ್ಟು ಬಿಗಿಯಾಯಿತು. ಗ್ಸಿ ತನ್ನ ಅತ್ಯಂತ ನಂಬುಗೆಯ ಬಂಟ ಚೆನ್ ಫ್ರಾಂಕೋನನ್ನು ಈ ಭಾಗದ ಮೇಲ್ವಿಚಾರಣೆಗೆಂದೇ ನೇಮಿಸಿದನು. ಈ ಹಿಂದೆ ಟಿಬೆಟ್ ನ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದ ಚೆನ್ ಅಲ್ಲಿ ನಡೆಸಿದ ಕ್ರೌರ್ಯವನ್ನೇ ಇಲ್ಲೂ ನಡೆಸಲು ಮುಂದಾಗಿ ಅದರಲ್ಲಿ ಯಶಸ್ವಿಯೂ ಆದ. ಇಂದು ಗ್ಸಿನ್ಜಿಯಾಂಗ್ ಎಂದು ಕರೆಯಲ್ಪಡುವ ಈ ಸ್ವಾಯತ್ತ ಭಾಗದಲ್ಲಿ ಉಯ್ಘರ್ ಮುಸ್ಲಿಮರ ಪ್ರತ್ಯೇಕವಾದಿ ಚಳುವಳಿ ತಾರಕಕ್ಕೇರಿದೆ. ಚೀನಾದ ದಬ್ಬಾಳಿಕೆಯ ಆಡಳಿತವನ್ನು ವಿರೋಧಿಸಿ ಇಲ್ಲಿನ ಮುಸ್ಲಿಮರು ಭಯೋತ್ಪಾದಕ ಕೃತ್ಯಗಳನ್ನು ನಡೆಸುವಲ್ಲಿಗೆ ಇದು ಬಂದು ನಿಂತಿದೆ. ಚೀನಾ ಇಲ್ಲಿನ ಜನರಿಗೆ ನೀಡುತ್ತಿರುವ ಕಿರುಕುಳಗಳು ಒಂದೆರಡಲ್ಲ. ಉಯ್ಘರ್ ಮುಸ್ಲಿಮರ ನೂರಾರು ವರ್ಷ ಹಳೆಯದಾದ ಮಸೀದಿಗಳನ್ನು ಬುಲ್ಡೋಜರ್ ನ ಸಹಾಯದಿಂದ ನೆಲಸಮಗೊಳಿಸಲಾಗುತ್ತಿದೆ. ಅಂದಾಜು ಒಂದು ಮಿಲಿಯನ್ ಗೂ ಹೆಚ್ಚು ಉಯ್ಘರ್ ಯುವಕರನ್ನು ಬ್ರೇನ್ ವಾಶ್ ಕ್ಯಾಂಪಿನಲ್ಲಿ‌ ಬಂಧಿಸಿಡಲಾಗಿದೆ. ಅನುಮಾನ ಬಂದವರನ್ನು ಬಲವಂತವಾಗಿ ಬಂಧಿಸಿ ರಹಸ್ಯವಾಗಿ ಹತ್ಯೆ ಮಾಡಲಾಗುತ್ತಿದೆ. ಮುಖಗಳನ್ನು ಗುರುತಿಸುವ ಸಿಸಿ ಕ್ಯಾಮರಾಗಳನ್ನು ರಸ್ತೆ ರಸ್ತೆಗೂ ಅಳವಡಿಸಿರುವ ಚೈನಾ ಪ್ರತಿಯೊಬ್ಬರ ಬಯೋಮೆಟ್ರಿಕ್ ಡಾಟಾಗಳನ್ನು ಸಂಗ್ರಹಿಸಿದೆ. ಪ್ರತ್ಯೇಕತೆಯ ಹೋರಾಟ ತೀವ್ರವಾಗುವ ಭಯದಿಂದ ಜಗತ್ತಿನಲ್ಲೇ ಅತ್ಯಂತ ಆಧುನಿಕವಾದ ರಕ್ಷಣಾ ತಾಂತ್ರಿಕತೆಗಳನ್ನು ಇಲ್ಲಿ ಅಳವಡಿಸಿದೆ. 11 ಮಿಲಿಯನ್ ಉಯ್ಘರ್ ಮುಸ್ಲಿಮರಿದ್ದ ಈ ಜಾಗದಲ್ಲಿ ಇಂದು ಚೈನೀಯರ ಬಲವಂತದ ವಲಸೆಯಿಂದ ಅರ್ಧದಷ್ಟು ಹಾನ್ ಚೈನೀಯರೇ ತುಂಬಿಕೊಂಡಿದ್ದಾರೆ. ಮಸೀದಿಗಳಲ್ಲಿ ಅಧ್ಯಕ್ಷನ ಭಾವಚಿತ್ರವನ್ನು ಕಡ್ಡಾಯವಾಗಿ ಅಳವಡಿಸುವ ಆದೇಶ ಜಾರಿಯಲ್ಲಿದೆ. ಗಡ್ಡಬಿಡುವುದು ಮತ್ತು ಬುರ್ಖಾ ಧರಿಸುವುದನ್ನು ನಿಷೇಧಿಸಲಾಗಿದೆ. ಕುರಾನ್ ಮೇಲೆ ನಿರ್ಬಂಧ ಜಾರಿಯಲ್ಲಿದೆ. ಉಯ್ಘರ್ ಭಾಷೆಯನ್ನು ಶಾಲೆಗಳಲ್ಲಿ ಕಲಿಯುವುದನ್ನು ನಿಷೇಧಿಸಲಾಗಿದೆ. ಹೀಗಾಗಿ ಇಲ್ಲಿನ ಜನರು ಚೀನಾದ ಕಪಿಮುಷ್ಠಿಯಿಂದ ಹೊರಬರುವ ದಾರಿ ಕಾಯುತ್ತಿದ್ದಾರೆ. ಒಂದು ವೇಳೆ ಅಂತರಾಷ್ಟ್ರೀಯ ಸಮುದಾಯ ಇವರ ಕೂಗಿಗೆ ಸ್ಪಂದಿಸಿದರೆ, ಚೀನಾ ಒಡೆಯುವ ಲೆಕ್ಕಾಚಾರಗಳು ಪಕ್ಕಾ ಆದರೆ ಏಷ್ಯಾದ ಒಂದು ಸ್ವತಂತ್ರ ಮುಸ್ಲಿಮ್ ರಾಷ್ಟ್ರವಾಗಿ ಅಸ್ತಿತ್ವಕ್ಕೆ ಬರಲಿದೆ. ಒಂದು ವೇಳೆ ಇದು ಸಾಧ್ಯವಾದರೆ ಚೈನಾ ತನ್ನ ಸುತ್ತಲಿನ ಆರೇಳು ರಾಷ್ಟ್ರಗಳೊಡನೆ ರಸ್ತೆ ಸಂಪರ್ಕ ಕಳೆದುಕೊಳ್ಳಲಿದೆ. ಚೀನಾದ ಮಹತ್ವಾಕಾಂಕ್ಷೆಯ ಬಹುದೊಡ್ಡ ಯೋಜನೆ ಸಿಲ್ಕ್ ರೋಡ್ ನ ಕನಸು ನುಚ್ಚುನೂರಾಗಲಿದೆ. ಈಗಾಗಲೇ ಈ ಗ್ರಾಂಡ್ ಯೋಜನೆಗಾಗಿ ಚೈನಾ ಖರ್ಚು ಮಾಡಿರುವ ಹಣ ವಾಪಾಸ್ ಬರದೇ ಅದಕ್ಕೆ ಅಗುವ ನಷ್ಟ ಖಂಡಿತವಾಗಿ ಭರಿಸಲಾಗದ್ದು. ಖಾಸ್ ಗರ್ ನಿಂದ ಕಾರಾಕೋರಂ ಶ್ರೇಣಿಗಳ ನಡುವೆ ಲಡಾಕ್ ಮತ್ತು ಪಿಒಕೆ ಮೂಲಕ ಪಾಕಿಸ್ತಾನದ ಗ್ವಾದಾರ್ ಬಂದರಿಗೆ ಸಂಪರ್ಕ ಕಲ್ಪಿಸುವ ಸಿಪೆಕ್ ಯೋಜನೆ ಹಳ್ಳ ಹಿಡಿಯಲಿದೆ.
  4. ಹಾಂಕಾಂಗ್ ಮತ್ತು ಮಕಾವು – ಹಾಂಗ್ ಕಾಂಗ್ ಎಂಬ ನಗರವು ಅನೇಕ ವರ್ಷಗಳ ಕಾಲ ಬ್ರಿಟೀಷರ ವಸಾಹತಾಗಿದ್ದು 1997 ರಲ್ಲಿ ಬ್ರಿಟಿಷರಿಂದ ಚೀನಾಕ್ಕೆ ಮರಳಿಸಲ್ಪಟ್ಟಿತು. ಅದೇ ರೀತಿ ಪೋರ್ಚುಗಲ್ ನ ವಸಾಹತಾಗಿದ್ದ ಮಕಾವು ನಗರವೂ ಸಹಾ 1999 ರಲ್ಲಿ ಪೋರ್ಚುಗಲ್ ನಿಂದ ಚೀನಾಕ್ಕೆ ಮರಳಿಸಲ್ಪಟ್ಟಿತು. ಆದರೆ ಬ್ರಿಟನ್ ಮತ್ತು ಪೋರ್ಚುಗಲ್ ಗಳು “ಒಂದು ದೇಶ ಎರಡು ವ್ಯವಸ್ಥೆ” ಎಂಬ ತರಹದ ಕೆಲವು ಷರತ್ತುಗಳನ್ನು ಮುಂದಿಟ್ಟು ಚೈನಾದೊಂದಿಗೆ 50 ವರ್ಷಗಳ ಅವಧಿಯ ಒಪ್ಪಂದವೇರ್ಪಡಿಸಿದ ನಂತರವೇ ತಮ್ಮ ವಸಾಹತುಗಳನ್ನು ಚೈನಾದ ಸುಪರ್ದಿಗೆ ಒಪ್ಪಿಸಿದ್ದು.

ಈ ಒಪ್ಪಂದಗಳಿಗೆ ಕಾರಣಗಳೂ ಇವೆ. ಚೈನಾ ಒಂದು ಕಮ್ಯುನಿಸ್ಟ್ ರಾಷ್ಟ್ರ. ಅಧ್ಯಕ್ಷ ಮತ್ತು ಪಕ್ಷದ ಸರ್ವಾಧಿಕಾರದಡಿಯಲ್ಲಿ ದೇಶ ನಡೆಯಬೇಕು. ಪತ್ರಿಕಾ ಸ್ವಾತಂತ್ರ್ಯವಾಗಲಿ, ಅಭಿವ್ಯಕ್ತಿ ಸ್ವಾತಂತ್ರ್ಯವಾಗಲಿ ಇಲ್ಲಿ ಲಭ್ಯವಿಲ್ಲ. ಸರ್ಕಾರದ ವಿರುದ್ಧ ಮಾತನಾಡುವುದಿರಲಿ, ವಿರುದ್ಧ ಭಾವನೆ ಇರುವ ಸಣ್ಣ ಅನುಮಾನ ಬಂದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುತ್ತದೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ನೂರಾರು ವರ್ಷಗಳ ಕಾಲ ಬ್ರಿಟಿಷ್ ಮತ್ತು ಪೋರ್ಚುಗಲ್ ನ ವಸಾಹತಾಗಿ ಬದುಕಿದ ಈ ಸೋದರಿ ನಗರಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಲ್ಲಿದ್ದು ಸ್ವಾತಂತ್ರ್ಯವೇ ಪ್ರಧಾನವಾದ ಯೂರೋಪಿಯನ್ ಸಂಸ್ಕ್ರತಿ ಬೆಳೆದುನಿಂತಿದೆ. ಸಾಲದ್ದಕ್ಕೆ ಈ ಎರಡೂ ಚಿಕ್ಕ ನಗರಗಳು ವಿಶ್ವದ ಅತ್ಯಂತ ಶ್ರೀಮಂತ ನಗರಗಳಾಗಿ ಬೆಳೆದು ನಿಂತಿವೆ. ಮಕಾವು ಜಗತ್ತಿನ ಜೂಜಿನ ರಾಜಧಾನಿ ಎಂದೇ ಪ್ರಸಿದ್ಧವಾಗಿ ಅದರ ಮೂಲಕ ಅಪಾರ ಧನವನ್ನು ಸಂಪಾದಿಸುತ್ತಿದ್ದರೆ, ಹಾಂಗ್ ಕಾಂಗ್ ಪ್ರಪಂಚದ ಮೂರು ಪ್ರಮುಖ ವ್ಯಾಪಾರ ಕೇಂದ್ರಗಳಲ್ಲಿ ಒಂದಾಗಿರುವ ಮೂಲಕ ಸಂಪದ್ಭರಿತವಾಗಿದೆ. ದಕ್ಷಿಣ ಚೀನಾ ಸಮುದ್ರ ತೀರದಲ್ಲಿ ಇರುವ ಈ ಎರಡೂ ನಗರಗಳು ಇಂದು ಚೀನಾದೊಳಗೆ ವೈಚಾರಿಕ ಕ್ರಾಂತಿಯನ್ನು ಬಿತ್ತುವ ಸಾಧ್ಯತೆಗಳಿವೆ. ಚೈನಾ ಈ ಎರಡೂ ನಗರಗಳಿಗೂ ಪರ್ಯಾಯವಾಗಿ ಶೆನ್ ಜೆನ್ ಎಂಬ ಹೆಸರಿನ ಒಂದು ಬೃಹತ್ ನಗರವನ್ನು ನಿರ್ಮಿಸುತ್ತಿದೆ ಮಾತ್ರವಲ್ಲದೇ ಒಪ್ಪಂದದ ಪ್ರಕಾರ ಈ ನಗರಗಳಿಗೆ ನೀಡಿದ್ದ ಸ್ವಾತಂತ್ರ್ಯವನ್ನು ಕಡಿತಗೊಳಿಸುವ ಪ್ರಯತ್ನವನ್ನು ತೀವ್ರಗೊಳಿಸುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಂತ ಹಂತವಾಗಿ ಕಮ್ಯುನಿಸ್ಟ್ ವ್ಯವಸ್ಥೆಗೆ ಪರಿವರ್ತಿಸುವ ಈ ಯತ್ನ ಈ ನಗರಗಳ ನಿವಾಸಿಗಳಿಗೆ ಆತಂಕವನ್ನು ಹುಟ್ಟಿಸುತ್ತಿದೆ. ಇಷ್ಟು ದಿನ ಇದ್ದ ಸ್ವಾತಂತ್ರ ಇದ್ದಕ್ಕಿದ್ದಂತೆ ಮರೆಯಾಗುವುದಾದರೆ ಯಾರಿಗೆ ತಾನೆ ಕಷ್ಟವಾಗುವುದಿಲ್ಲ ಹೇಳಿ. ಹೀಗಾಗಿ ಈ ಎರಡೂ ನಗರಗಳಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ಇದಕ್ಕೆ ಉತ್ತರವಾಗಿ ಚೈನಾ ಈ ನಗರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮಸೂದೆಯೊಂದನ್ನು ಪಾಸು ಮಾಡಿದೆ. ಇದರಿಂದ ಅಮೆರಿಕಾ ಸೇರಿದಂತೆ ಅನೇಕ ಪ್ರಜಾಪ್ರಭುತ್ವ ಪರ ರಾಷ್ಟ್ರಗಳು ಕೆರಳಿವೆ. ಇದು ಹೀಗೆ ಮುಂದುವರೆದು ಚೈನಾ ದುರ್ಬಲವಾದರೆ ಚೈನಾದ ಜನರೂ ಸಹಾ ಹಾಂಗ್ ಕಾಂಗ್ ಮಾದರಿಯ ಪ್ರಜಾಪ್ರಭುತ್ವ ಸರ್ಕಾರವನ್ನು ಅಪೇಕ್ಷಿಸಿ ಪ್ರತಿಭಟನೆಗೆ ಇಳಿಯಬಹುದು ಎಂಬ ಭಯ ಚೈನಾಕ್ಕಿದೆ. ಒಂದು ವೇಳೆ ಹಾಗಾದರೆ ಚೀನಾದಲ್ಲಿ ಕಮ್ಯುನಿಸ್ಟ್ ಸರ್ಕಾರ ಪತನಗೊಂಡು ಪ್ರಜಾಪ್ರಭುತ್ವ ಬರಲು ಈ ನಗರಗಳು ಕಾರಣವಾಗಲಿವೆ ಮತ್ತು ಜಗತ್ತಿಗೆ ಮುಖ್ಯವಾಗಿ ಅಮೆರಿಕಾಗೆ ಈ ಬದಲಾವಣೆ ತುರ್ತಾಗಿ ಬೇಕಾಗಿದೆ.

  1. ಮಂಚೂರಿಯಾ, ಇನ್ನರ್ ಮಂಗೋಲಿಯಾ, ಯುನಾನ್ ಮತ್ತಿತರ ಪ್ರತ್ಯೇಕವಾದೀ ಚಳುವಳಿಗಳು.
    ಟಿಬೆಟ್, ಪೂರ್ವ ತುರ್ಕಿಸ್ತಾನದಂತೆಯೇ ಮಂಚೂರಿಯಾ ಮತ್ತು ಯುನಾನ್ ಹಾಗೇ ಮಂಗೋಲಿಯಾದ ಕೆಳಭಾಗಗಳನ್ನೂ ಚೀನಾ ಒತ್ತುವರಿ ಮಾಡಿಕೊಂಡಿದೆ. ಹೀಗಾಗಿ ಅಲ್ಲೂ ಸಹಾ ಸಣ್ಣಪುಟ್ಟ ಪ್ರತ್ಯೇಕವಾದಿ ಚಿಂತನೆಗಳು ಅಸ್ತಿತ್ವದಲ್ಲಿದೆ. ಚೀನಾದ ಹತ್ತಿಕ್ಕುವ ಸಾಮರ್ಥ್ಯದ ಕಾರಣ
    ಈ ಮೇಲ್ಕಂಡ ಪ್ರತ್ಯೇಕತಾವಾದಿ ಚಳುವಳಿಗಳು ಅಷ್ಟೇನೂ ದೊಡ್ಡ ಪ್ರಮಾಣದ ಪ್ರಭಾವವನ್ನು ಇಂದಿನ ದಿನಗಳಲ್ಲಿ ಬೀರಲಾಗದಿದ್ದರೂ ಒಂದು ವೇಳೆ ಚೈನಾ ಪತನಗೊಂಡರೆ ಈ ಭಾಗಗಳೂ ಸಹಾ ಸ್ವತಂತ್ರ ರಾಷ್ಟ್ರಗಳಾಗುವ ಅಥವಾ ಬೇರೆ ರಾಷ್ಟ್ರಗಳ ತೆಕ್ಕೆಗೆ ಸೇರುವ ಸಾಧ್ಯತೆಗಳು ಇಲ್ಲದಿಲ್ಲ.

ಹೀಗೆ ಅಮೆರಿಕಾದ ಸೇನಾ ಸಹಾಯದಿಂದ ತೈವಾನ್, ಸನ್ನಿವೇಶದ ಲಾಭ ಪಡೆದು ಟಿಬೆಟ್ ಮತ್ತು ಪೂರ್ವ ತುರ್ಕಿಸ್ತಾನದ ಉಯ್ಘರ್ ಗಳು ಸ್ವತಂತ್ರಗೊಳ್ಳಲು ಸಿದ್ಧವಾದರೆ, ಹಾಂಗ್ ಕಾಂಗ್ ಮತ್ತು ಮಕಾವು ನಗರಗಳು ಚೈನಾದೊಳಗೆ ಪ್ರಜಾಪ್ರಭುತ್ವವಾದಿ ಅಲೆಯನ್ನು ಎಬ್ಬಿಸಲು ಶಕ್ತವಾಗಿವೆ. ಇದರ ಮಧ್ಯದಲ್ಲಿ ಚೈನಾದ ಉಳಿದ ಕೆಲವು ಪ್ರಾಂತಗಳೂ ಸ್ವಾತಂತ್ರ್ಯಗೊಂಡರೆ ಅಥವಾ ನೆರೆ ರಾಷ್ಟ್ರಗಳೊಡನೆ ವಿಲೀನಗೊಂಡರೆ ಉಳಿಯುವ ಚೈನಾ ವಿಸ್ತೀರ್ಣದಲ್ಲಿ ಮತ್ತು ಜನಸಂಖ್ಯೆ ಎರಡರಲ್ಲೂ ಭಾರತಕ್ಕಿಂತಲೂ ಚಿಕ್ಕದಾಗಿರುತ್ತದೆ ಮತ್ತು ಸೊನ್ನೆ ಆಕೃತಿಯಲ್ಲಿರುತ್ತದೆ.

ಕಾರಣ ನಂ 3 – ಪರಿಸರದ ಮಿತಿಮೀರಿದ ಶೋಷಣೆಯಿಂದ ಉಂಟಾಗಿರುವ ಆತಂಕ

ಚೈನಾದಲ್ಲಿ ಕಮ್ಯುನಿಸ್ಟ್ ಪಕ್ಷ ಅಸ್ತಿತ್ವಕ್ಕೆ ಬಂದ ನಂತರ ಇವತ್ತಿನವರೆಗೂ ರಾಷ್ಟ್ರ ನಿರಂತರವಾಗಿ ಕೈಗಾರಿಕೀಕರಣಗೊಳ್ಳುತ್ತಿದೆ. ಇಂದು ಚೈನಾ ಜಗತ್ತಿನ ಸಾಟಿಯಿಲ್ಲದ ಅತಿ ದೊಡ್ಡ ಉತ್ಪಾದಕ ರಾಷ್ಟ್ರವಾಗಿದೆ. ಕಬ್ಬಿಣದಿಂದ ಹಿಡಿದು ಬಟ್ಟೆಯವರೆಗೆ ಎಲ್ಲ ರೀತಿಯ ವಸ್ತುಗಳನ್ನು ಅತಿ ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತದೆ. ಇದರಿಂದ ಚೀನಾದ ಅರ್ಥವ್ಯವಸ್ಥೆ ಅಭಿವೃದ್ಧಿಯ ಶಿಖರವನ್ನೇರಿತು ನಿಜ. ಆದರೆ ಇದರ ಉಪ ಉತ್ಪನ್ನವಾಗಿ ಚೀನಾದ ಪರಿಸರ ಇನ್ನಿಲ್ಲದಂತೆ ನಾಶಗೊಂಡಿತು. ಇಂದು ಚೀನಾ ಜಗತ್ತಿನ ಅತಿಹೆಚ್ಚು ಕಲ್ಲಿದ್ದಲು ಬಳಸುವ, ಕಾರ್ಬನ್ ಡೈ ಆಕ್ಸೈಡ್ ಉತ್ಪಾದನೆ ಮಾಡುವ, ನದಿಯನ್ನು ಕೊಳಕು ಮಾಡುವ ಪ್ರಮುಖ ರಾಷ್ಟ್ರವಾಗಿ ಗುರುತಿಸಿಕೊಂಡಿದೆ. ಹೊರ ಜಗತ್ತಿಗೆ ಮುಕ್ತವಾಗಿ ತೆರೆದುಕೊಳ್ಳದ ಕಾರಣ ಅಲ್ಲಿನ ಪರಿಸರದ ವಾಸ್ತವ ಚಿತ್ರಣ ನಿಖರವಾಗಿ ತಿಳಿಯುತ್ತಿಲ್ಲವಾದರೂ ಸರಕಾರಿ ಸ್ವಾಮ್ಯದ ಪತ್ರಿಕೆಗಳೇ ವರದಿ ಮಾಡಿರುವಂತೆ ಚೀನಾದಲ್ಲಿ ಪರಿಸರ ನಾಶದಿಂದ ಸಾಯುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರುತ್ತಿದೆ. ವರದಿಯೊಂದರ ಪ್ರಕಾರ ಪ್ರತಿವರ್ಷ 1.6 ಮಿಲಿಯನ್ ಜನರು ಪರಿಸರಮಾಲಿನ್ಯದ ಪರಿಣಾಮ ಚೈನಾದಲ್ಲಿ ಅಸುನೀಗುತ್ತಿದ್ದಾರೆ. ಚೀನಾದ ನದಿಗಳು ಹೇಗೆ ಕಲುಷಿತಗೊಂಡಿವೆಯೆಂದರೆ ಸಾಗರಕ್ಕೆ ಹರಿಯಲು ಬಿಡದೇ ಮೂರು ಮೂರು ಬಾರಿ ನೀರನ್ನು ವಾಪಾಸು ಕಳಿಸಿ ಬಳಸುವ ತಂತ್ರಜ್ಞಾನದಿಂದ ಎಲ್ಲ ನದಿಗಳ ನೀರು ಬಹುತೇಕ ಕುಡಿಯಲು ಅಯೋಗ್ಯವಾಗಿ ಮಾರ್ಪಟ್ಟಿವೆ. ವಿಷಕಾರಿ ರಾಸಾಯನಿಕಗಳು ನದಿಯೊಳಗೆ ಹರಿಯುತ್ತಿವೆ. ಇದರಿಂದಾಗಿ ಇದನ್ನು ಕುಡಿಯುವ ಜನರ ಆರೋಗ್ಯದ ಮೇಲೆ ಅಪಾರವಾದ ಪರಿಣಾಮ ಬೀರುತ್ತಿದೆ. ಅಂತರ್ಜಲ ಬಳಕೆಯ ಪ್ರಮಾಣ ಮಿತಿಮೀರಿದ್ದರಿಂದ ಜಲಮಟ್ಟದಲ್ಲಿ ವ್ಯಾಪಕ ಕುಸಿತ ಕಂಡುಬಂದಿದೆ. ಎಲ್ಲಿಯವರೆಗೆ ಎಂದರೆ ಮುಂದಿನ ಕೆಲವೇ ವರ್ಷಗಳಲ್ಲಿ ಚೈನಾ ಭೀಕರ ಜಲಕ್ಷಾಮವನ್ನು ಎದುರಿಸಲಿದೆ. ಹಾಗೇನಾದರೂ ನೀರಿಗಾಗಿಯೇ ಚೈನಾದೊಳಗೆ ಹಾಹಾಕಾರವೇರ್ಪಟ್ಟರೆ 150 ಕೋಟಿ ಜನಸಂಖ್ಯೆಯ ರಾಷ್ಟ್ರದ ಪರಿಸ್ಥಿತಿ ಏನಾಗಬಹುದು ಯೋಚಿಸಿನೋಡಿ.

ಇನ್ನು ಚೀನಾ ದೇಶದ ಗಾಳಿ ಎಷ್ಟು ಕಲುಷಿತಗೊಂಡಿವೆಯೆಂದರೆ ಮಕ್ಕಳು – ಯುವಕ – ಮುದುಕರೆನ್ನದೇ ಉಸಿರಾಟದ ಸಮಸ್ಯೆಗಳು ಎಲ್ಲ ವಯೋಮಾನದವರಲ್ಲೂ ತೀವ್ರವಾಗಿ ಕಾಣಿಸಿಕೊಂಡು ಅವರನ್ನು ಅಕಾಲಿಕ ಮರಣಕ್ಕೆ ದೂಡುತ್ತಿದೆ. ಮೊದಲೇ ಒನ್ ಚೈಲ್ಡ್ ಪಾಲಿಸಿಯಿಂದ ಜನಸಂಖ್ಯೆಯ ಕುಸಿತಕ್ಕೆ ಒಳಗಾಗಿರುವ ರಾಷ್ಟ್ರದಲ್ಲಿ ಅಕಾಲಿಕ ಮರಣಗಳ ಸಂಖ್ಯೆ ಜಾಸ್ತಿಯಾದರೆ ಪರಿಸ್ಥಿತಿ ಹೇಗಿರಬಹುದು ಯೋಚಿಸಿ ನೋಡಿ. ಇದರೊಂದಿಗೆ ತಿನ್ನುವ ಆಹಾರವನ್ನು ಬೆಳೆಯುವ ಮಣ್ಣೂ ಸಹಾ ತನ್ನ ಸಾರವನ್ನು ಕಳೆದುಕೊಂಡಿದೆ. ವರ್ಷಕ್ಕೆ ಮೂರು ಬೆಳೆ ಬೆಳೆಯುವ ಜಗತ್ತಿನ ಎಲ್ಲ ರಾಷ್ಟ್ರಗಳಿಗಿಂತಾ ಹೆಚ್ಚು ಆಹಾರ ಬೆಳೆಯುವ ಪೈಪೋಟಿಯಲ್ಲಿ ಚೈನಾ ತನ್ನ ಭೂಮಿಯ ಮೇಲೆ ವಿಪರೀತ ಅತ್ಯಾಚಾರ ನಡೆಸಿಬಿಟ್ಟಿದೆ. ಇದರ ಪರಿಣಾಮ ರಾಸಾಯನಿಕ ಹಾಕದೇ ಭೂಮಿಯಲ್ಲಿ ಬೆಳೆಬೆಳೆಯಲು ಸಾಧ್ಯವೇ ಇಲ್ಲ ಎಂಬಂತಾಗಿದೆ. ಹೀಗಾದರೆ ಒಂದಲ್ಲ ಒಂದು ದಿನ ಆಹಾರ ಕ್ಷಾಮ ಬಂದೊದಗಿದರೆ ಆಶ್ಚರ್ಯವಿಲ್ಲ. ವಿಜ್ಞಾನಕ್ಕೂ ಒಂದು ಮಿತಿಯಿದೆಯಲ್ಲವೇ? ಆಹಾರವನ್ನು ಭೂಮಿ ಮಾತ್ರ ಬೆಳೆಯಬಹುದೆಂಬ ಸತ್ಯ ಗೊತ್ತಿಲ್ಲದ ಕಮ್ಯುನಿಸ್ಟ್ ಸರ್ಕಾರ ತನ್ನ ಪತನದ ಅಂಚಿಗೆ ಬಂದು ನಿಂತುಬಿಟ್ಟಿದೆ. ಇದರೊಂದಿಗೆ ಮಿತಿಮೀರಿದ ಅರಣ್ಯನಾಶ, ವನ್ಯಜೀವಿಗಳ ಮಾರಣಹೋಮಗಳ ಪರಿಣಾಮದಿಂದ ಚೈನಾದ ಋತುಮಾನಗಳಲ್ಲೇ ಏರುಪೇರು ಉಂಟಾಗಿಹೋಗಿದೆ. ಇನ್ನು ಅಣುವಿಕಿರಣಗಳಂಥಾ ಹೊಸ ಮಾಲಿನ್ಯಗಳ ಸ್ಥಿತಿಗತಿ ಚೈನಾದಲ್ಲಿ ಅದು ಹೇಗಿದೆಯೋ ದೇವರೇ ಬಲ್ಲ. ಇತ್ತೀಚೆಗಷ್ಟೇ ಹೊರಬಂದ ಕರೋನಾ ವೈರಸ್ ಕೃತಕ ವೈರಸ್ ಗಳ ಲ್ಯಾಬ್ ನಿಂದ ಲೀಕ್ ಆಗಿದೆ ಎಂಬ ಸುದ್ದಿ ನಿಜವೇ ಆಗಿದ್ದರೆ ಚೈನಾ ಪ್ರಕೃತಿಯ ಜೊತೆ ಎಂತಹಾ ಅಪಾಯಕಾರಿ ಆಟ ಆಡುತ್ತಿದೆಯೆಂದು ಸುಲಭವಾಗಿ ಊಹಿಸಬಹುದು.

ಕಾರಣ ನಂ 4 – ಕಮ್ಯುನಿಸ್ಟ್ ಮಿಲಿಟರಿ ಆಡಳಿತದ ವಿರುದ್ಧ ಉಂಟಾಗಲಿರುವ ಜನರ ದಂಗೆ

ಎಲ್ಲರಿಗೂ ತಿಳಿದಿರುವಂತೆ ಚೈನಾ ಒಂದು ಕಮ್ಯುನಿಸ್ಟ್ ರಾಷ್ಟ್ರ. ಪ್ರಜೆಗಳ ಹಕ್ಕುಗಳು, ಪತ್ರಿಕಾ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಇವೆಲ್ಲಕ್ಕೂ ಇಲ್ಲಿ ಅವಕಾಶವೇ ಇಲ್ಲ. ಅಲ್ಲಿನ ಪ್ರಜೆಗಳಿಗೆ ನಿರಂತರವಾಗಿ ಕತ್ತೆಗಳಂತೆ ದುಡಿಯುವುದಕ್ಕೆ ಮಾತ್ರ ಸ್ವಾತಂತ್ರ್ಯವಿದೆ. ಅದೂ ಅತಿ ಕಡಿಮೆ ಕೂಲಿಗೆ! ಕಮ್ಯುನಿಸ್ಟ್ ನಾಯಕರ ಮಹತ್ವಾಕಾಂಕ್ಷೆಗಳಿಗಾಗಿ ಚೀನಾದ ಮುಗ್ಧ ಜನರು ಇನ್ನಿಲ್ಲದಂತೆ ಜೀವ ತೇಯುತ್ತಿದ್ದಾರೆ. ಎಲ್ಲ ಕಮ್ಯುನಿಸ್ಟ್ ಮತ್ತು ಸರ್ವಾಧಿಕಾರಿ ಸರ್ಕಾರಗಳಂತೆಯೇ ಚೀನಾ ಸರ್ಕಾರವೂ ಪಾರದರ್ಶಕವಾಗಿರದೇ ಕಡು ಭ್ರಷ್ಟವಾಗಿದೆ. ಆದರೆ ಪತ್ರಿಕಾ ಸ್ವಾತಂತ್ರ್ಯವಿಲ್ಲದ್ದರಿಂದ ಹೊರಬರುತ್ತಿಲ್ಲ ಅಷ್ಟೇ. ಜನರಿಗೆ ಅದನ್ನು ಪ್ರತಿಭಟಿಸುವ ಸ್ವಾತಂತ್ರ್ಯವಿಲ್ಲ. ಒಂದು ವೇಳೆ ಸರ್ಕಾರದ ವಿರುದ್ಧ ಮಾತನಾಡಿದರೆ ಜೈಲು ಗ್ಯಾರಂಟಿ. ಸಾಮಾಜಿಕ ಜಾಲತಾಣಗಳು, ವೆಬ್ ಸೈಟುಗಳು ಇತ್ಯಾದಿಗಳು ಚೈನಾದೊಳಗೆ ಮಾತ್ರ ಸೀಮಿತವಾಗಿದೆ. ಮತ್ತು ಅವು ನಿರಂತರ ಸರ್ಕಾರದ ಕಣ್ಗಾವಲಿನಲ್ಲಿರುತ್ತದೆ. ಖಾಸಗಿತನ ಎಂಬುದು ಚೈನೀಯರಿಗೆ ಅತಿ ದುರ್ಲಭ ವಸ್ತುವಾಗಿಬಿಟ್ಟಿದೆ. ಪ್ರಪಂಚದ ಅನ್ಯ ರಾಷ್ಟ್ರಗಳ ನಡುವೆ ಸಂಪರ್ಕವಿಲ್ಲದೆ ಚೈನಾ ಜನತೆ ಕೂಪಮಂಡೂಕಗಳಾಗಿಬಿಟ್ಟಿದ್ದಾರೆ. ಧರ್ಮವನ್ನು ಅಫೀಮು ಎಂದು ಪರಿಗಣಿಸುವ ನಾಸ್ತಿಕ ಕಮ್ಯುನಿಸ್ಟ್ ಸರ್ಕಾರದ ಕಾರಣ ಚೈನೀಯರಿಗೆ ಧಾರ್ಮಿಕ ಆಚರಣೆಗಳನ್ನು ಸೀಮಿತಗೊಳಿಸಲಾಗಿದೆ. ಹೀಗಾಗಿ ಜೀವನಕ್ಕೊಂದು ಅರ್ಥವಿಲ್ಲದೇ ಮನಶಾಂತಿಯಿಲ್ಲದೆ ಜನ ಸ್ಪೋಟಗೊಳ್ಳುವ ಹಂತ ತಲುಪಿದ್ದಾರೆ. ಚೈನಿಯರು ತಮ್ಮದೇ ದೇಶದಲ್ಲಿ ಒಂದು ರೀತಿಯ ಆಧುನಿಕ ಜೀತಪದ್ಧತಿಗೆ ಒಳಪಟ್ಟಿದ್ದಾರೆ. 1989 ರಲ್ಲಿ ತಿಯಾನ್ಮನ್ ಚೌಕಾದಲ್ಲಿ ಪ್ರಜಾಪ್ರಭುತ್ವ ಸರ್ಕಾರಕ್ಕಾಗಿ ಅಗ್ರಹಿಸಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯನ್ನು ಅತ್ಯಂತ ಕ್ರೂರವಾಗಿ ದಮನಿಸಿದ ರೀತಿ ಇಡೀ ದೇಶದ ಪ್ರಜೆಗಳ ನೆನಪಿನಿಂದ ಮಾಸಿಲ್ಲ. ಅಂದು ತನ್ನದೆ ದೇಶದ ಸಾವಿರಾರು ಜನ ಯುವಕರನ್ನು ಚೀನೀ ಸೈನ್ಯವು ಟ್ಯಾಂಕುಗಳನ್ನು, ಬುಲ್ಡೋಜರುಗಳನ್ನು ಹತ್ತಿಸಿ ಕೊಂದಿತು. ಮುಂದಿನ ಹತ್ತಾರು ವರ್ಷಗಳ ಕಾಲ ಪ್ರಜಾಪ್ರಭುತ್ವದ ಸೊಲ್ಲೆತ್ತದಂತೆ ಜನರನ್ನು ಬೆದರಿಸುವ ತಂತ್ರ ಅದು. ಹೀಗಾಗಿ ಬಹು ಸಮಯ ಹತ್ತಿಕ್ಕಿದ ಚೀನಾದ ಪ್ರಜೆಗಳ ಆಕ್ರೋಶ ಹೊರಬರಲು ಕೆಲವೇ ಸಮಯ ಬಾಕಿಯಿದೆ. ಒಂದು ಸಣ್ಣ ಕಿಡಿಯ ಅವಶ್ಯಕತೆಯಿದೆ. ಈ ಕುದಿ ಒಂದು ನಿರ್ದಿಷ್ಟ ಬಿಂದು ಮುಟ್ಟಿದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಚೀನಾದ ಒಂದು ಸಣ್ಣ ಪ್ರಮಾಣದ ಅಲುಗಾಟ ಸಹಾ ಚೀನಾದ ಒಳಗೆ ಬಹುದೊಡ್ಡ ಸ್ಫೋಟವನ್ನೇ ಉಂಟುಮಾಡಬಹುದು. ಅಮೆರಿಕಾದ ಶ್ವೇತಭವನದ ಮಾಜಿ ಚೀಫ್ ಸ್ಟ್ರಾಟಜಿಸ್ಟ್ ಸ್ಟೀವ್ ಬ್ಯಾನನ್ ಹೇಳುವಂತೆ “ಒಂದು ವೇಳೆ ಇಂದಿನ ಪರಿಸ್ಥಿತಿಯಲ್ಲಿ ಚೀನಾದಲ್ಲಿ ಇನ್ನೊಂದು ತಿಯಾನ್ಮನ್ ದುರಂತ ಮರುಕಳಿಸಿದರೆ ಚೈನಾ ಪತನಗೊಳ್ಳುವುದು ನಿಶ್ಚಿತ” ವಾಗಿದೆ.

ಕಾರಣ ನಂ 5 – ಚೈನಾ ಮತ್ತು ವಿಶ್ವದ ಶಕ್ತ ರಾಷ್ಟ್ರಗಳ ನಡುವಣ ಸಂಭವಿಸಬಹುದಾದ ಯುದ್ಧ

ಕರೋನಾ ಕಾರಣದಿಂದ ಇಂದು ವಿಶ್ವವೆಲ್ಲಾ ಅಮೆರಿಕಾದ ನೇತೃತ್ವದಲ್ಲಿ ಚೀನಾದ ವಿರುದ್ಧ ಒಂದಾಗಿವೆ. ಅಮೆರಿಕಾ, ಭಾರತ ಅಥವಾ ತೈವಾನ್ ಈ ಮೂರು ರಾಷ್ಟ್ರಗಳಲ್ಲಿ ಯಾವ ರಾಷ್ಟ್ರ ಚೀನಾ ವಿರುದ್ಧ ಯುದ್ಧ ಮಾಡಿದರೂ ಜಗತ್ತಿನ ನೈತಿಕ ಬೆಂಬಲ‌ ದೊರೆಯುವ ಸ್ಥಿತಿ ಇದೆ‌. ಆದರೆ ಚೈನಾ ಒಂದು ಅಣ್ವಸ್ತ್ರ ರಾಷ್ಟ್ರ. ಮಿಲಿಟರಿ ದೃಷ್ಟಿಯಿಂದ ವಿಶ್ವದ ಎರಡನೇ ಅತಿ ದೊಡ್ಡ ರಾಷ್ಟ್ರ. ಸಾಲದ್ದಕ್ಕೆ ಜಗತ್ತಿನ ಅನೇಕ ರಾಷ್ಟ್ರಗಳನ್ನು ವ್ಯಾವಹಾರಿಕವಾಗಿ ಆರ್ಥಿಕವಾಗಿ ತನ್ನ ಮೇಲೆ‌ ಅವಲಂಬಿತವಾಗುವಂತೆ ಮಾಡಿಕೊಂಡಿರುವ ರಾಷ್ಟ್ರ. ಹೀಗಿರುವಾಗ ಯುದ್ಧ ಸಾಧ್ಯವೇ? ಖಂಡಿತವಾಗಿ ಯೋಚಿಸಬೇಕಾದ ಪ್ರಶ್ನೆಯೇ. ಆದರೆ ಯುದ್ಧದಿಂದ ಪ್ರಪಂಚಕ್ಕೆಷ್ಟು ನಷ್ಟವಾಗುತ್ತದೋ ಅದರ ನೂರುಪಟ್ಟು ಚೈನಾಕ್ಕೆ ನಷ್ಟವಾಗುವುದು ಖಚಿತ. ಯುದ್ಧದ ನಂತರ ಚೈನಾ ಈಗಿರುವ ಚೈನಾವಾಗಿ ಖಂಡಿತವಾಗಿ ಇರುವುದಿಲ್ಲ. ಎರಡನೇ ಮಹಾಯುದ್ಧದ ಬಳಿಕ ಜರ್ಮನಿಗೆ ಬಂದ ಸ್ಥಿತಿಗಿಂತಲೂ ಘೋರ ಸ್ಥಿತಿ ಚೀನಾಗೆ ಬಂದೊದಗಲಿದೆ‌. ಹೀಗಾಗಿ ಚೈನಾ ಯುದ್ದ ಮಾಡುವ ಸಾಹಸವನ್ನು ತಾನೇ ತಾನಾಗಿ ಮುಂದಾಗಲಾರದು. ಆದರೆ ಚೈನಾವನ್ನು ಕೆಣಕಿ ಯುದ್ಧದ ವಾತಾವರಣವನ್ನು ನಿರ್ಮಾಣ ಮಾಡಿ, ಜಗತ್ತಿಗೆ ಅದರ ಲಾಭ ನಷ್ಟಗಳ‌ ಲೆಕ್ಕಾಚಾರ ಮಾಡಿಸಿ ಚೈನಾವನ್ನು ಯುದ್ಧಕ್ಕೆ ಮೊದಲೇ ಏಕಾಂಗಿಯನ್ನಾಗಿ ಮಾಡುವ ತಂತ್ರವನ್ನು ಅಮೆರಿಕಾ ಏನಾದರೂ ಹೆಣೆದರೆ ಅದರಿಂದ ಪಾರಾಗುವುದು ಚೈನಾಕ್ಕೆ ಸುಲಭಸಾಧ್ಯವಂತೂ ಖಂಡಿತವಾಗಿ ಇಲ್ಲ. ಭಾರತ ಮತ್ತು ತೈವಾನ್ ಅನ್ನು ಈ ನಿಟ್ಟಿನಲ್ಲಿ ದಾಳಗಳನ್ನಾಗಿ ಮಾಡಿಕೊಳ್ಳಲೂ ಅಮೆರಿಕಾ ಹಿಂದೇಟು ಹಾಕಲಾರದು. ಅದಕ್ಕೇ ಲಡಾಕ್ ಗಡಿಯಲ್ಲಿ ಚೈನಾ ಕ್ಯಾತೆ ತೆಗೆದು ನಮ್ಮ ವಿರುದ್ಧ ಗುಟುರುಹಾಕುವ ನಾಟಕ ಮಾಡುತ್ತಿರುವುದು. ಹಾಗೇ ನೇಪಾಳವನ್ನು ಎತ್ತಿ ಕಟ್ಟಿ ಭಾರತವನ್ನು ಎಂಗೇಜ್ ಮಾಡಲು ಯತ್ನಿಸುತ್ತಿರುವುದು. ಭಾರತಕ್ಕೆ ಹೇಗಿದ್ದರೂ 1962 ರ ಸೇಡು ಬಾಕಿ‌ ಇದೆ. ಜೊತೆಗೆ ಯುದ್ಧದ ನಂತರ ಚೈನಾ ಪತನವಾಗಿ ಹೊಸದಾಗಿ ಸೃಷ್ಟಿಯಾಗುವ ಟಿಬೆಟ್ ಭಾರತ ಮತ್ತು ಚೀನಾ ನಡುವಿನ ಗಡಿಯನ್ನೇ ಮುಚ್ಚಿಹಾಕಿ ಸಾವಿರಾರು ಕಿಲೋಮೀಟರ್ ಮೈಚಾಚಿ ಮಲಗಿಬಿಡುತ್ತದೆ‌. ಹಾಗಾದಾಗ ಭಾರತದ‌ ಒಬ್ಬ ವೈರಿ ಶಾಶ್ವತವಾಗಿ ನಮ್ಮಿಂದ ದೂರವಾಗಿಬಿಡುತ್ತಾನೆ. ಆದರೆ ಭಾರತ ಇದಕ್ಕೆ ತಯಾರಿದೆಯೇ? ಯೋಚಿಸಬೇಕು. ತೈವಾನ್ ಸಹಾ ಚೀನಾವೇ ತನ್ನ ಮೇಲೆ ಯುದ್ಧಕ್ಕೆ ಬರುವವರೆಗೂ ತಾನು ಯುದ್ಧ ಮಾಡುವ ಸ್ಥಿತಿಯಲ್ಲಿ ಇಲ್ಲ. ಯಾಕೆಂದರೆ ತೈವಾನ್ ಗೆ ಅಮೆರಿಕಾ ಸಹಾಯ ದೊರೆತರೂ ಯುದ್ಧ ಚೀನಾ ಪಾಲಿಗೆ ಸೋಲಾದರೆ ತೈವಾನ್ ಪಾಲಿಗೆ ಸಾವು! ಹೀಗಾಗಿ ತೈವಾನ್ ಮತ್ತು ಭಾರತ ತಾವೇ ತಾವಾಗಿ ಯುದ್ಧಕ್ಕಿಳಿಯುವ ಸಾಧ್ಯತೆ ಕಡಿಮೆ. ಹಾಗಿದ್ದರೂ ವಿಪರೀತ ಭಯಗೊಂಡಿರುವ ಚೈನಾ ಪ್ರಚೋದನೆಗೆ ಮೊದಲೇ ಪ್ರತಿಕ್ರಿಯಿಸುತ್ತಿದೆ. ಒಂದು ವೇಳೆ ಅಮೆರಿಕಾ ಅಂದುಕೊಂಡಂತೆ ಯುದ್ಧ ಮಾಡಲಾಗದಿದ್ದರೆ ತಾನೇ ಕದನಕ್ಕಿಳಿಯಬೇಕು. ಆ ಸಾಧ್ಯತೆ ವಿಶ್ವಸಮುದಾಯ ಅಮೆರಿಕಾಕ್ಕೆ ನೀಡುವ ಬೆಂಬಲ‌ ಮತ್ತು ಅಮೆರಿಕಾ ಜನತೆ ಯುದ್ಧ ತೀರ್ಮಾನಕ್ಕೆ ಬೆಂಬಲಿಸುವುದರ ಆಧಾರದ ಮೇಲೆ ನಿಂತಿದೆ. ಬರುವ ಚುನಾವಣೆಯಲ್ಲಿ ಟ್ರಂಪ್ ರನದನು ಇನ್ನೊಂದು ಅವಧಿಗೆ ಆಯ್ಕೆ ಮಾಡುವ ಮೂಲಕ ಅಮೆರಿಕಾ ಈ ಸಾಧ್ಯತೆಯನ್ನು ಕಾರ್ಯರೂಪಕ್ಕೆ ತರಬಹುದು. ಒಂದು ವೇಳೆ ಅಮೆರಿಕಾ ಅಂದುಕೊಂಡಂತೆ ನೇರ ಯುದ್ಧ ಮಾಡಲಾಗದಿದ್ದರೂ ಆರ್ಥಿಕ ಯುದ್ಧ ಘೋಷಿಸುವ ಮೂಲಕವೂ ಚೀನಾವನ್ನು ಯುದ್ಧ ಮಾಡದೇ ಸೋಲಿಸಬಹುದಾಗಿದೆ. ಅದಾಗಲೇ ಭಾರತದಲ್ಲಿ ಆತ್ಮನಿರ್ಭರತೆಯ ಚಿಂತನೆ ಆರಂಭವಾಗಿ ಚಿಗುರೊಡೆದು ಚೈನಾಕ್ಕೆ ಬಿಸಿತಗುಲಲು ಆರಂಭವಾಗಿದೆ. ಅಮೇರಿಕಾ ಒಂದು ಹೆಜ್ಜೆ ಮುಂದೆಹೋಗಿ ಆರ್ಥಿಕ ದಿಗ್ಬಂಧನ ಹಾಕುವ ಮಾತನ್ನಾಡುತ್ತಿದೆ. ಜಗತ್ತಿನ ಉಳಿದ ರಾಷ್ಟ್ರಗಳು ತಮ್ಮ ಅವಶ್ಯಕತೆಗಳಿಗಾಗಿ ಚೈನಾ ಮೇಲೆ ಅವಲಂಬಿತವಾಗದೇ ಪರ್ಯಾಯ ರಾಷ್ಟ್ರಗಳ ಹುಡುಕಾಟದಲ್ಲಿದೆ. ಹೀಗಾಗಿ ಆರ್ಥಿಕ ಯುದ್ಧವು ಚೀನಾದ ವಿರುದ್ಧ ಬಂದೂಕನ್ನೇ ಎತ್ತದೇ ಒಂದು ಗುಂಡನ್ನೂ ಹಾರಿಸದೇ ಆ ದೇಶದ ಬುಡವನ್ನೇ ಅಲುಗಾಡಿಸುವ ಶಕ್ತಿ ಹೊಂದಿದೆ. ಒಂದು ವೇಳೆ ಹಾಗೇನಾದರೂ ಆಗಿ ಚೈನಾದ ಆರ್ಥಿಕ ಪರಿಸ್ಥಿತಿ ಹದಗೆಟ್ಟರೆ ಅದರ ಪರಿಣಾಮ ಚೀನಾದ 150 ಕೋಟಿ ಬೃಹತ್ ಸಂಖ್ಯೆಯ ಸಾಮಾನ್ಯ ಜನರ ಮೇಲಾಗುತ್ತದೆ. ಸಾಮಾನ್ಯ ಜನರಿಗೆ ಜೀವನ ನಡೆಸುವುದು ಕಷ್ಟವಾದರೆ ಫಲಿತಾಂಶ ಕಮ್ಯುನಿಸ್ಟ್ ಸರ್ಕಾರ‌ದ ಪತನ ಮತ್ತು ಹೊಸ ರಾಷ್ಟ್ರಗಳ ಉದಯ! ಹೇಗೂ ಅಮೇರಿಕಾಗೆ ಸೋವಿಯತ್ ಯೂನಿಯನ್ ಅನ್ನು ಪತನ ಮಾಡಿದ ಅನುಭವವಿದ್ದೇ ಇದೆಯಷ್ಟೆ!

ಒಟ್ಟಾರೆಯಾಗಿ ಈ ಮೇಲ್ಕಂಡ ಎಲ್ಲ ಭಯಗಳು ಒಂದಾಗಿ ಚೈನಾ ನಾಯಕರ‌ ನಿದ್ದೆಗೆಡಿಸಿರುವುದು ಸತ್ಯ. ವಾತಾವರಣ ಚೈನಾದ ವಿರುದ್ಧವಿದೆ. ಕರೋನಾ ಕಾರಣದಿಂದ ವಿಶ್ವ ಚೈನಾದ ನಾಯಕತ್ವವನ್ನು ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿ ಇಲ್ಲದೇ ತಪ್ಪಿಸಿಕೊಳ್ಳಲು ಹಾತೊರೆಯುತ್ತಿದೆ. ಜಗತ್ತು ಚೈನಾಕ್ಕಿಂತಾ ಅಮೇರಿಕಾದ ನಾಯಕತ್ವದಲ್ಲೇ ಹೆಚ್ಚು ಸುರಕ್ಷಿತತೆಯನ್ನು ಕಾಣುತ್ತಿದೆ. ಈ ನಡುವೆ ಯುದ್ಧವೇನಾದರೂ ನಡೆದು ಚೈನಾ ಪತನವಾಗಿ ಅಮೆರಿಕಾ ಸುಸ್ತಾಗಿ ಹೋಗಿ ಜಗತ್ತೇನಾದರೂ ಚೈನಾ ಮತ್ತು ಅಮೆರಿಕಾವನ್ನೂ ಮೀರಿ ವಿಶ್ವದ ದೊಡ್ಡಣ್ಣನನ್ನು ಭಾರತದಲ್ಲಿ ಕಾಣಲಾರಂಭಿಸಿದರೆ ಅದಕ್ಕೆ ಹೊಣೆ ಮೋದಿಯೇ ಅಥವಾ ಕರೋನಾವೇ ಎಂಬ ಚರ್ಚೆ ಬಾರತದಲ್ಲಿ ರಾಷ್ಟ್ರೀಯವಾದಿಗಳು ಮತ್ತು ಕಮ್ಯುನಿಸ್ಟರ ನಡುವೆ ಆರಂಭವಾಗಲಿದೆ!!!!!!

✍🏻 ನಿತ್ಯಾನಂದ ವಿವೇಕವಂಶಿ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: