
ಬೆಂಗಳೂರು (ಜೂ.7): ಸ್ಯಾಂಡಲ್ವುಡ್ ಪಾಲಿಗೆ ಭಾನುವಾರ ಕಹಿ ದಿನವಾಗಿ ಮಾರ್ಪಾಡಾಗಿದೆ. ಸ್ಯಾಂಡಲ್ವುಡ್ನಲ್ಲಿ ಹೆಸರು ಮಾಡಿದ್ದ ಖ್ಯಾತ ನಟ ಚಿರಂಜೀವಿ ಸರ್ಜಾ ಇಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರಿಗೆ 39 ವರ್ಷ ವಯಸ್ಸಾಗಿತ್ತು.
ಸ್ಯಾಂಡಲ್ವುಡ್ನಲ್ಲಿ ತಮ್ಮದೇ ಛಾಪು ಮೂಡಿಸಿದ್ದ ನಟ ಚಿರಂಜೀವಿ ಸರ್ಜಾ ಇಂದು ಮೃತಪಟ್ಟಿದ್ದಾರೆ. ಇದು ಸಾವಿರಾರು ಅಭಿಮಾನಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಚಿರಂಜೀವಿ ಸರ್ಜಾಗೆ ನಿನ್ನೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು . ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರ ವಯುಸ್ಸು ಚಿಕ್ಕದಾದ್ದರಿಂದ ಇದು ಹೃದಯ ಸಂಬಂಧಿ ಕಾಯಿಲೆ ಇರಬಹುದು ಎಂದು ಕುಟುಂಬದವರು ಭಾವಿಸಿರಲಿಲ್ಲ. ಆದರೆ, ಉಸಿರಾಟದ ತೊಂದರೆ ಜೊತೆಗೆ ತೀವ್ರ ಎದೆನೋವು ಕಾಣಿಸಿಕೊಂಡಿತ್ತಂತೆ. ಆಗಲೇ ಅವರಿಗೆ ಹೃದಯಾಘಾತವಾಗಿದೆ ಎನ್ನಲಾಗಿದೆ.
ಆಸ್ಪತ್ರೆ ವೈದ್ಯರು ಅವರಿಗೆ ಚಿಕಿತ್ಸೆ ನೀಡಲು ತುಂಬಾನೆ ಪ್ರಯತ್ನ ಪಟ್ಟಿದ್ದರು. ಆದಾಗ್ಯೂ, ಚಿಕಿತ್ಸೆ ಫಲಕಾರಿಯಾಗಿಲ್ಲ. ನಿಯಮಗಳಂತೆ ಅವರ ಸ್ವಾಬ್ ಕಲೆಕ್ಟ್ ಮಾಡಿ ಲ್ಯಾಬ್ ಗೆ ಕಳಿಸಲಾಗಿದೆ. ನಿನ್ನೆಯ ಅನಾರೋಗ್ಯಕ್ಕೆ ಕಾರಣವೇನು ಎನ್ನುವುದು ತಿಳಿದುಬಂದಿಲ್ಲ.
ಸದ್ಯ ಜಯನಗರದ ಅಪೊಲೊ ಆಸ್ಪತ್ರೆಯಲ್ಲಿ ಚಿರಂಜೀವಿ ಸರ್ಜಾ ಮೃತದೇಹ ಇಡಲಾಗಿದೆ. ಕೆಲವೇ ಕ್ಷಣಗಳಲ್ಲಿ ಪೋಲೀಸ್ ಇಲಾಖೆಗೆ ಹಸ್ತಾಂತರ ಮಾಡಲಾಗುತ್ತದೆ ಎಂದು ಅಪೊಲೊ ಆಸ್ಪತ್ರೆ ಮೂಲಗಳ ಮಾಹಿತಿ ನೀಡಿವೆ.
ಚಿರಂಜೀವಿ ಸರ್ಜಾ ನಟಿ ಮೇಘನಾ ರಾಜ್ ಅವರ ಜೊತೆ 2017ರಲ್ಲಿ ನಿಶ್ವಿತಾರ್ಥ ಮಾಡಿಕೊಂಡಿದ್ದರು. 2018ರಲ್ಲಿ ವಿವಾಹವಾಗಿದ್ದರು. ಇದಾದ ಎರಡೇ ವರ್ಷದಲ್ಲಿ ಅವರು ಮೃತಪಟ್ಟಿದ್ದಾರೆ. ಅವರ ಸಾವಿಗೆ ಇಡೀ ಕನ್ನಡ ಚಿತ್ರರಂಗ ಕಂಬನಿ ಸುರಿಸಿದೆ.
2009ರಲ್ಲಿ ತೆರೆಕಂಡ ವಾಯುಪುತ್ರ ಸಿನಿಮಾ ಮೂಲಕ ಚಿರಂಜೀವಿ ಸರ್ಜಾ ಬಣ್ಣದ ಬದುಕಿಗೆ ಕಾಲಿಟ್ಟಿದ್ದರು. ನಂತರ ಸೀಜರ್, ಸಿಂಗಾ, ಅಮ್ಮಾ ಐ ಲವ್ ಯು ಸೇರಿ 20ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ನಟಿಸಿದ್ದರು. ಶಿವಾರ್ಜುನ ಅವರ ಕೊನೆಯ ಸಿನಿಮಾ. ಇದಲ್ಲದೆ, ನಾಲ್ಕೈದು ಚಿತ್ರಗಳಲ್ಲಿ ಅವರು ನಟಿಸುತ್ತಿದ್ದರು.