
ಎನ್‌ಡಿಎ 2.0 ಸರಕಾರ ಒಂದು ವರ್ಷ ಪೂರೈಸಿದ ಬಳಿಕ ನೆನ್ನೆ ನಡೆದ ಮೊದಲ ಸಂಪುಟ ಸಭೆಯಲ್ಲಿ ಮಹತ್ವದ ಪ್ರಸ್ತಾಪಗಳಿಗೆ ಸಂಪುಟ ಅನುಮೋದನೆ ದೊರೆತಿದೆ. ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳಿಗೆ ನೆರವಾಗುವ ಹಲವು ನಿರ್ಣಯಗಳಿಗೂ ಸಂಪುಟ ಸಭೆ ಹಸಿರು ನಿಶಾನೆ ತೋರಿದೆ. ಜೊತೆಗೆ ಬೀದಿ ಬದಿ ವ್ಯಾಪಾರಿಗಳ ಸಂಕಷ್ಟಕ್ಕೂ ಸರಕಾರ ಸ್ಪಂದಿಸಿದೆ. ಅವರಿಗೆ ಸುಲಭ ಸಾಲ ನೀಡಲು ‘ಪಿಎಂ ಸ್ವಾನಿಧಿ’ ಹೆಸರಿನ ಹೊಸ ಯೋಜನೆಯನ್ನು ಆರಂಭಿಸಲಾಗಿದೆ. ನಗರ ಸ್ಥಳೀಯ ಸಂಸ್ಥೆಗಳ ಮೂಲಕ ಈ ಯೋಜನೆ ಜಾರಿಗೊಳ್ಳಲಿದೆ. ಸಾಲ ಮರುಪಾವತಿ ಗಡುವು ವಿಸ್ತರಣೆ ಬ್ಯಾಂಕ್‌ಗಳಿಂದ ಪಡೆದ 3 ಲಕ್ಷ ರೂ.ವರೆಗಿನ ಅಲ್ಪಾವಧಿ ಕೃಷಿ ಸಾಲ ಮರುಪಾವತಿಯ ಗಡುವನ್ನು ಆಗಸ್ಟ್ 31, 2020ರವರೆಗೂ ವಿಸ್ತರಿಸಲಾಗಿದೆ. ಈ ಗಡುವಿನೊಳಗೆ ಮರುಪಾವತಿ ಮಾಡಿದರೆ ಬಡ್ಡಿ ರಿಯಾಯಿತಿ ದೊರೆಯಲಿದೆ.ಭಾರೀ ಪ್ರಮಾಣದಲ್ಲಿ ಬೆಂಬಲ ಬೆಲೆಯನ್ನು ಹೆಚ್ಚಿಸಿ ರೈತರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ. ಭತ್ತ, ರಾಗಿ, ಜೋಳ, ದ್ವಿದಳ ಧಾನ್ಯಗಳು ಸೇರಿದಂತೆ ಒಟ್ಟು 14 ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಶೇ. 50ರಿಂದ ಶೇ.84ರವರೆಗೂ ಹೆಚ್ಚಳ ಮಾಡಲಾಗಿದೆ.‘ಕೃಷಿ ವೆಚ್ಚ ಮತ್ತು ಬೆಲೆ ಆಯೋಗ’ದ ವರದಿ ಆಧರಿಸಿ ಉತ್ಪಾದನಾ ವೆಚ್ಚಕ್ಕಿಂತಲೂ 1.5 ಪಟ್ಟು ಅಧಿಕ ಮಟ್ಟದಲ್ಲಿ ಬೆಂಬಲ ಬೆಲೆಯನ್ನು ನಿಗದಿಗೊಳಿಸಲಾಗಿದೆ. ರೈತರ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸಚಿವ ಸಂಪುಟವು ಮುಂಗಾರು ಹಂಗಾಮಿನ 14 ಕೃಷಿ ಉತ್ಪನ್ನಗಳ ಬೆಂಬಲ ಬೆಲೆಯನ್ನು ಹೆಚ್ಚಿಸಲು ತೀರ್ಮಾನಿಸಿದೆ.ಇನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ಆನ್‌ಲೈನ್ ಮೂಲಕ ಮೆಕ್ಕೆಜೋಳ ಮತ್ತು ಹೂವು ಬೆಳೆದ ರೈತರಿಗೆ 5 ಸಾವಿರ ಪರಿಹಾರ ಧನದ ಮೊದಲ ಕಂತು ಬಿಡುಗಡೆ ಮಾಡಿದ್ದಾರೆ. ಆನ್‌ಲೈನ್ ಮೂಲಕ ಪರಿಹಾರ ಯೋಜನೆಗೆ ಚಾಲನೆ ನೀಡಿ ₹ 666 ಕೋಟಿ ಬಿಡುಗಡೆ ಮಾಡಿದರು. ಇದೇ ವೇಳೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳ ಪ್ರಗತಿ ಪರಿಶೀಲಿಸಿದರು. ಮೆಕ್ಕೆ ಜೋಳ ಹಾಗೂ ಹೂವು ಬೆಳೆಗಾರರಿಗೆ 666 ಕೋಟಿ ರೂ.ಗಳ ಪರಿಹಾರ ಮೊತ್ತವನ್ನು ರೈತರ ಖಾತೆಗೆ ಆನ್ ಲೈನ್ ಮೂಲಕ ಬಿಡುಗಡೆ ಮಾಡಿದರು.